ಲಕ್ಷ್ಮಿ ಹೆಬ್ಬಾಳಕರ
ಉಡುಪಿ: ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಚಕ್ರವರ್ತಿ. ಬಾಯಿ ತೆರೆದರೆ ರಾಮಾಯಣ, ಭಗವದ್ಗೀತೆ, ಮಹಾಭಾರತ ಎಂದು ಹೇಳುವ ಅವರು ಯಾವ ಪ್ರಮಾಣದಲ್ಲಿ ಸುಳ್ಳು ಹೇಳುತ್ತಾರೆ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಕುಂದಾಪುರದಲ್ಲಿ ಹಮ್ಮಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ಕಾರ್ಯಕ್ರಮದ ಆಯೋಜಕರಿಗೆ ಪೊಲೀಸರು ನೋಟಿಸ್ ನೀಡಿರುವ ವಿಚಾರವಾಗಿ ಶುಕ್ರವಾರ ಇಲ್ಲಿ ಪ್ರತಿಕ್ರಿಯಿಸಿದ ಅವರು, ಕಪ್ಪಗಿರುವುದನ್ನು ಬೆಳ್ಳಗೆ ಮಾಡುವುದರಲ್ಲಿ, ಬೆಳ್ಳಗೆ ಇರುವುದನ್ನು ಕಪ್ಪು ಮಾಡುವುದರಲ್ಲಿ ಸೂಲಿಬೆಲೆ ನಿಸ್ಸೀಮರು ಎಂದರು.
ವಾಕ್ ಸ್ವಾತಂತ್ರ್ಯ ಸೇರಿದಂತೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಇಡೀ ದೇಶದ ಇತಿಹಾಸದಲ್ಲಿ ಸಂವಿಧಾನವನ್ನು ಎತ್ತಿ ಹಿಡಿದ ಪಕ್ಷ ಕಾಂಗ್ರೆಸ್ ಎಂದು ಅವರು ಹೇಳಿದರು.
ನಾವು ಸೂಲಿಬೆಲೆಯಿಂದ ಪಾಠ ಕೇಳಬೇಕಾಗಿಲ್ಲ. ಅವರು ಮೂರು ದಿನ ಉಡುಪಿ ಜಿಲ್ಲೆಯಲ್ಲಿ ಇರುವ ವಿಚಾರ ಪೊಲೀಸ್ ವರಿಷ್ಠಾಧಿಕಾರಿಗಳಿಂದ ತಿಳಿಯಿತು. ಖಂಡಿತವಾಗಿ ಅವರು ತಮ್ಮ ಪ್ರವಾಸ ಮಾಡಬಹುದು. ಆದರೆ ದ್ವೇಷ ಭಾಷಣ, ಸುಳ್ಳು ಬಿತ್ತುವ ಕೆಲಸ, ವಿಷ ಬೀಜ ಬಿತ್ತುವ ಕೆಲಸ ಮಾಡದಿರಲಿ ಎಂದರು.
ಕರಾವಳಿಗೆ ಕೋಮ ನಿಗ್ರಹ ಪಡೆ ರಚಿಸಿರುವುದಕ್ಕೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಬಿಜೆಪಿಯವರು ಒಂದು ಕಡೆ ಕೋಮುವಾದವನ್ನು ಪ್ರಚೋದಿಸುತ್ತಿದ್ದಾರೆ.ಇನ್ನೊಂದು ಕಡೆ ನಾವು ಕೋಮು ಪ್ರಚೋದನೆ ಮಾಡುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.