ADVERTISEMENT

‘ಎಂಡೋಸಲ್ಫಾನ್ ಪೀಡಿತರ ಪುನರ್ವಸತಿ ಕೇಂದ್ರಕ್ಕೆ ಅನುದಾನ ಕೊಡಿ’

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 16:25 IST
Last Updated 4 ನವೆಂಬರ್ 2020, 16:25 IST
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.   

ಉಡುಪಿ: ಕುಂದಾಪುರ ತಾಲ್ಲೂಕಿನ ನಾಡಾ ಗ್ರಾಮ ಪಂಚಾಯ್ತಿಯಲ್ಲಿ ಮೀಸಲಿಟ್ಟಿರುವ ಜಮೀನಿನಲ್ಲಿ ಎಂಡೋ ಸಲ್ಫಾನ್ ಪೀಡಿತರ ಪುನರ್ವಸತಿ ಕೇಂದ್ರ ನಿರ್ಮಿಸಲು ಅನುದಾನ ಮಂಜೂರು ಮಾಡಬೇಕು ಸೇರಿದಂತೆ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಕೋಣಿ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಎಂಡೋ ಸಲ್ಫಾನ್ ಪೀಡಿತರ ಪುನರ್ವಸತಿ ಕೇಂದ್ರ ನಿರ್ಮಾಣ ಹಾಗೂ ಸಲಕರಣೆಗಳಿಗೆ ಸರ್ಕಾರಕ್ಕೆ ₹ 11 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಇದುವರೆಗೂ ಅನುದಾನ ಮಂಜೂರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಂಡೋಸಲ್ಫಾನ್ ಪೀಡಿತರಿಗೆ ನೀಡುತ್ತಿರುವ ಸಹಾಯಧನ ಕ್ರಮವಾಗಿ ₹1,500ದಿಂದ 3,000, 3,000ರಿಂದ 6,000ಕ್ಕೆ ಏರಿಸಬೇಕು. ಬುದ್ದಿಮಾಂಧ್ಯ ಹಾಗೂ ಅಂಗವಿಕಲರನ್ನು ನೋಡಿಕೊಳ್ಳುವ ಪೋಷಕರಿಗೆ ಕನಿಷ್ಠ ₹ 3,000 ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಂತ್ರಸ್ತರಿಗೆ ಖಾಸಗಿ ಬಸ್‌ಗಳಲ್ಲಿ ಶೇ 50ರಷ್ಟು ರಿಯಾಯಿತಿ, ಅಂತ್ಯೋದಯ ಕಾರ್ಡ್‌ ಸೌಲಭ್ಯ, ಅಂಗವಿಕಲರ ಭವನ ನಿರ್ಮಾಣಕ್ಕೆ ಜಾಗ ಮೀಸಲಿಡಬೇಕು. ಜಿಲ್ಲಾಮಟ್ಟದ ಸಮಿತಿಗೆ ಅಂಗವಿಕಲರ ಪೋಷಕರನ್ನು ನೇಮಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಹೆಬ್ಬಾರ್, ಕಾರ್ಯದರ್ಶಿ ಕೃಷ್ಣ ಪೂಜಾರಿ, ಸಹ ಕಾರ್ಯದರ್ಶಿ ನಾರಾಯಣ ಶೇರಿಗಾರ, ಕೋಶಾಧಿಕಾರಿ ಬಾಬು ದೇವಾಡಿಗ, ಗಣಪತಿ ಪೂಜಾರಿ, ಇಂದಿರಾ ಹೆಗ್ಡೆ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.