ಉಡುಪಿ: ಗಣೇಶ ಚತುರ್ಥಿ ಹಬ್ಬದ ಆಚರಣೆಯ ಪೂರ್ವಭಾವಿಯಾಗಿ ನಗರದ ಮಾರುಕಟ್ಟೆಗಳಲ್ಲಿ ಸೋಮವಾರ ಹಣ್ಣು, ತರಕಾರಿ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.
ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಹೂವುಗಳನ್ನು ರಾಶಿ ಹಾಕಿ ಮಾರಾಟ ಮಾಡಲಾಗಿತ್ತು. ಗ್ರಾಹಕರು ಮುಗಿಬಿದ್ದು ಹೂವು, ಹಿಂಗಾರ, ಕಬ್ಬನ್ನು ಖರೀದಿಸಿದರು.
ಹಬ್ಬದ ಅಂಗವಾಗಿ ಶಾಪಿಂಗ್ ಮಾಲ್‌ಗಳಲ್ಲೂ ಜನರು ಕಿಕ್ಕಿರಿದು ತುಂಬಿದ್ದರು. ಕೆಲವು ಬಟ್ಟೆಯಂಗಡಿಗಳಲ್ಲೂ ಖರೀದಿ ಭರಾಟೆ ಜೋರಾಗಿತ್ತು. ಶ್ರೀಕೃಷ್ಣ ಮಠದ ಬಳಿಯ ರಥಬೀದಿಯುದ್ದಕ್ಕೂ ತರಕಾರಿ, ಹಣ್ಣು ಹಂಪಲು, ಹೂವು, ಕಬ್ಬು ಮಾರಾಟ ಗರಿಗೆದರಿತ್ತು.
ಗಣೇಶ ಹಬ್ಬದ ಸಂದರ್ಭದಲ್ಲಿ ಬಹುತೇಕರು ಮನೆಗಳಲ್ಲೂ ಸಣ್ಣ ಗಣಪತಿ ಮೂರ್ತಿ ಇಟ್ಟು ಪೂಜಿಸುತ್ತಾರೆ. ಈ ಕಾರಣಕ್ಕೆ ಪೂಜಾ ಸಾಮಗ್ರಿಗಳ ಖರೀದಿಗೂ ಜನರು ಮಾರುಕಟ್ಟೆಗಳಿಗೆ ಬಂದಿದ್ದರು.
ಉಡುಪಿ ನಗರದ ರಥ ಬೀದಿ, ಡಯಾನ ಸರ್ಕಲ್, ಸರ್ವಿಸ್ ಬಸ್ ನಿಲ್ದಾಣ ಮೊದಲಾದೆಡೆ ಹೂವಿನ ಮಾರಾಟ ನಡೆಯಿತು. ಸಾರ್ವಜನಿಕ ಗಣೇಶೋತ್ಸವದ ಪೆಂಡಲ್‌ಗಳ ಅಲಂಕಾರಕ್ಕಾಗಿಯೂ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.
ಈ ಕಾರಣಕ್ಕೆ ಪ್ರತಿವರ್ಷವೂ ಹಬ್ಬದ ಎರಡು ದಿವಸ ಮೊದಲು ಹಾಸನ, ಶಿವಮೊಗ್ಗ ಮೊದಲಾದೆಡೆಗಳಿಂದ ಹೂವಿನ ಮಾರಾಟಗಾರರು ಉಡುಪಿ ನಗರಕ್ಕೆ ಬರುತ್ತಾರೆ.
ಸೇವಂತಿಗೆ, ಕಾಕಡ, ತುಳಸಿ ದರ ಮಾರಿಗೆ ₹ 100 ಇತ್ತು. ಗುಲಾಬಿ ಹೂವಿನ ಮಾಲೆಯ ದರ ಮಾರಿಗೆ ₹ 150 ಇತ್ತು.
‘ಈ ಸಲ ಮಳೆಯಿಂದಾಗಿ ಹೂವು ಕಡಿಮೆ ಇದೆ. ನಾವು ಕೂಡ ಹೂವು ಬೆಳೆಗಾರರಿಂದ ಖರೀದಿಸಿ ಇಲ್ಲಿಗೆ ಮಾರಾಟ ಮಾಡಲು ತರುತ್ತೇವೆ. ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಇಲ್ಲಿನ ಗ್ರಾಹಕರು ಖರೀದಿಸುವುದಿಲ್ಲ’ ಎಂದು ಹಾಸನದ ಹೂವಿನ ಮಾರಾಟಗಾರ ರಂಗಸ್ವಾಮಿ ತಿಳಿಸಿದರು.
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಈ ಕಾರಣಕ್ಕೆ ಶಿವಮೊಗ್ಗ ಮೊದಲಾದ ಕಡೆಯ ವ್ಯಾಪಾರಿಗಳು ನಗರಕ್ಕೆ ಕಬ್ಬು ತಂದು ಮಾರಾಟ ಮಾಡುತ್ತಾರೆ. ಈ ಬಾರಿಯೂ ಹಲವು ಮಾರಾಟಗಾರರು ನಗರದಲ್ಲಿ ಕಬ್ಬಿನ ಮಾರಾಟ ನಡೆಸಿದರು. ಒಂದು ಕಬ್ಬಿನ ಬೆಲೆ ₹70ಕ್ಕೆ ಏರಿಕೆಯಾಗಿತ್ತು.
ಹೂವು ಬೆಳೆಯುವ ಪ್ರದೇಶಗಳಲ್ಲಿ ಈ ಸಲ ಭಾರಿ ಮಳೆಯಾಗಿರುವ ಕಾರಣ ಬೆಳೆ ನಾಶವಾಗಿದೆ. ಈ ಕಾರಣಕ್ಕೆ ಹೂವಿನ ದರ ಏರಿಕೆಯಾಗಿದೆರಂಗಸ್ವಾಮಿ ಹೂವಿನ ವ್ಯಾಪಾರಿ ಹಾಸನ
ಈ ಬಾರಿ ಹೂವು ಕಬ್ಬು ತರಕಾರಿ ಎಲ್ಲದರ ಬೆಲೆಯೂ ಏರಿಕೆಯಾಗಿದೆ. ಹಬ್ಬದ ಸಂದರ್ಭವಾಗಿರುವುದರಿಂದ ಖರೀದಿಸುವ ಅನಿವಾರ್ಯತೆ ಇದೆಶ್ಯಾಮಸುಂದರ್ ಮಣಿಪಾಲ
ತರಕಾರಿ ಹಣ್ಣಿನ ದರವೂ ಏರಿಕೆ
ಗಣೇಶ ಹಬ್ಬದ ಸಂದರ್ಭದಲ್ಲಿ ಏಲಕ್ಕಿ ಬಾಳೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಈ ಕಾರಣಕ್ಕೆ ದರವೂ ಅಧಿಕವಾಗುತ್ತದೆ. ಡಜನ್ ಏಲಕ್ಕಿ ಬಾಳೆಹಣ್ಣಿನ ದರ ಸೋಮವಾರ ₹100 ದಾಟಿತ್ತು. ಡ್ರ್ಯಾಗನ್ ಫ್ರೂಟ್ ದರ ಕೆ.ಜಿ.ಗೆ ₹200 ದಾಳಿಂಬೆ ಹಣ್ಣಿನ ದರ ಕೆ.ಜಿ.ಗೆ ₹ 200 ದಾಟಿತ್ತು. ಹಬ್ಬದ ಸಂದರ್ಭದಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆಯಾಗುತ್ತದೆ. ಆದರೂ ಕೊಂಡುಕೊಳ್ಳುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಹಣ್ಣಿನ ಮಾರಾಟಗಾರರು ತಿಳಿಸಿದರು. ತರಕಾರಿ ದರವೂ ಗಗನಕ್ಕೇರಿದ್ದು ಕೆ.ಜಿ. ಟೊಮೆಟೊ ದರ ₹50ಕ್ಕೆ ಏರಿಕೆಯಾಗಿತ್ತು. ಕ್ಯಾರೆಟ್ ಕೆ.ಜಿ.ಗೆ ₹80 ಬೀನ್ಸ್ ಕೆ.ಜಿ.ಗೆ ₹80 ಅಲಸಂಡೆ ದರ ಕೆ.ಜಿ.ಗೆ ₹75ಕ್ಕೆ ಏರಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.