ADVERTISEMENT

ಸಂಪೂರ್ಣ ಅಂಧತ್ವಕ್ಕೆ ಕಾರಣವಾಗುವ ಗ್ಲೊಕೋಮಾ

ಕಾಯಿಲೆ ಗುರುತಿಸಿ ಚಿಕಿತ್ಸೆ ಪಡೆದರೆ ದೃಷ್ಟಿದೋಷ ಉಳಿವು: ಡಾ.ಕೃಷ್ಣಪ್ರಸಾದ್ ಕೂಡ್ಲು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 15:29 IST
Last Updated 28 ಮಾರ್ಚ್ 2023, 15:29 IST
ಪ್ರಸಾದ್ ನೇತ್ರಾಲಯ ಹಾಗೂ ನೇತ್ರಜ್ಯೋತಿ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಮಂಗಳವಾರ ವಿಶ್ವ ಗ್ಲೊಕೋಮಾ ಹಾಗೂ ಅಪ್ಟೋಮೆಟ್ರಿ ದಿನಾಚರಣೆ ಅಂಗವಾಗಿ ಆಸ್ಪತ್ರೆಯ ಮುಂಭಾಗದಿಂದ ಬೋರ್ಡ್‌ ಹೈಸ್ಕೂಲ್‌ವರೆಗೆ ಜಾಗೃತಿ ಜಾಥಾ ನಡೆಯಿತು
ಪ್ರಸಾದ್ ನೇತ್ರಾಲಯ ಹಾಗೂ ನೇತ್ರಜ್ಯೋತಿ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಮಂಗಳವಾರ ವಿಶ್ವ ಗ್ಲೊಕೋಮಾ ಹಾಗೂ ಅಪ್ಟೋಮೆಟ್ರಿ ದಿನಾಚರಣೆ ಅಂಗವಾಗಿ ಆಸ್ಪತ್ರೆಯ ಮುಂಭಾಗದಿಂದ ಬೋರ್ಡ್‌ ಹೈಸ್ಕೂಲ್‌ವರೆಗೆ ಜಾಗೃತಿ ಜಾಥಾ ನಡೆಯಿತು   

ಉಡುಪಿ: ಗ್ಲುಕೋಮಾ ಕಣ್ಣಿನ ಗಂಭೀರ ಕಾಯಿಲೆಯಾಗಿದ್ದು ನಿರ್ಲಕ್ಷ್ಯ ಮಾಡಿದರೆ ಪೂರ್ಣ ಕುರುಡುತನಕ್ಕೆ ಒಳಗಾಗಬೇಕಾಗುತ್ತದೆ ಎಂದು ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು ಹೇಳಿದರು.

ಪ್ರಸಾದ್ ನೇತ್ರಾಲಯ ಹಾಗೂ ನೇತ್ರಜ್ಯೋತಿ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಮಂಗಳವಾರ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಗ್ಲೊಕೋಮಾ ಹಾಗೂ ಅಪ್ಟೋಮೆಟ್ರಿ ದಿನಾಚರಣೆಯಲ್ಲಿ ಮಾತನಾಡಿ, ಗ್ಲುಕೋಮಾ ಕಾಯಿಲೆಯು ಜನರಿಗೆ ಕಾಯಿಲೆಯ ಬಗ್ಗೆ ಅರಿವು ಕಡಿಮೆ ಇದೆ. ಸದ್ದಿಲ್ಲದೆ ಕಣ್ಣನ್ನು ಪ್ರವೇಶಿಸುವ ಕಾಯಿಲೆಯು ಐದು ವರ್ಷಗಳೊಳಗೆ ಸಂಪೂರ್ಣ ಅಂಧಕಾರಕ್ಕೆ ತಳ್ಳಿಬಿಡುವ ಗಂಭೀರ ಕಾಯಿಲೆಯಾಗಿದೆ.

ವೈದ್ಯರು ಕಾಯಿಲೆ ಗುರುತಿಸಿದ ಸಂದರ್ಭ ರೋಗಿಯು ಕಳೆದುಕೊಂಡಿರುವ ದೃಷ್ಟಿಯ ಅಂಶವನ್ನು ಮರಳಿ ಪಡೆಯಲಾಗುವುದಿಲ್ಲ. ಆದರೆ, ಸೂಕ್ತ ಔಷಧಗಳ ಬಳಕೆಯಿಂದ ಉಳಿದಿರುವ ದೃಷ್ಟಿಯನ್ನು ರಕ್ಷಿಸಿಕೊಳ್ಳಬಹುದಾಗಿದೆ. ಐದು ವರ್ಷದೊಳಗೆ ಪೂರ್ಣ ನಾಶವಾಗುವ ದೃಷ್ಟಿಯನ್ನು 25 ವರ್ಷಗಳ ಕಾಲ ಕಾಪಿಡಬಹುದಾಗಿದೆ ಎಂದರು.

ADVERTISEMENT

ಕಣ್ಣುಗುಡ್ಡೆಯ ಸುತ್ತ ಒತ್ತಡದಿಂದ ಆಗಾಗ ತಲೆ ನೋವು ಬರುವುದು, ಕನ್ನಡಕ ಬದಲಾಯಿಸುತ್ತಾ ಮುಂದುವರಿಯುವುದು ಸಹ ಗ್ಲುಕೋಮಾ ಲಕ್ಷಣವಾಗಿದೆ. ದೇಹದೊಳಗೆ ರಕ್ತದೊತ್ತಡದಂತೆ, ಕಣ್ಣಿನೊಳಗಡೆಯ ದ್ರವದ ಅಧಿಕ ಹರಿವಿನ ಒತ್ತಡವು ಗ್ಲುಕೋಮಾ ರೋಗಕ್ಕೆ ಕಾರಣವಾಗುತ್ತದೆ. ಸಮಸ್ಯೆ ಕಾಣಿಸಿಕೊಂಡವರು ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ಲುಕೋಮಾ ಬಗ್ಗೆ ಜಾಗೃತಿ ಮೂಡಿಸಲು 500 ಮಂದಿ ಪ್ರಸಾದ್ ನೇತ್ರಾಲಯದಿಂದ ಉಡುಪಿಯ ಸರ್ವೀಸ್ ಬಸ್ ನಿಲ್ದಾಣದವರೆಗೂ ಜಾಥಾ ನಡೆಸಲಾಯಿತು. ಡಾ. ಸೀಮಾ, ಪ್ರಸಾದ್ ನೇತ್ರಾಲಯದ ವೈದ್ಯ ಡಾ. ಪರೇಶ್, ಅಡಳಿತಾಧಿಕಾರಿ ಎಂ.ವಿ .ಆಚಾರ್ಯ, ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್, ಪ್ರಾಂಶುಪಾಲ ರಾಜಿಬ್ ಮಂಡಲ್, ಆಡಳಿತಾಧಿಕಾರಿ ಅಬ್ದುಲ್ ಖಾದರ್ ಇದ್ದರು.

ಗ್ಲುಕೋಮಾ ವಿಷಯ ಕುರಿತು ನಡೆಸಿದ ಪೋಸ್ಟರ್ ಸಮರ್ಪಣೆ ಸ್ಪರ್ಧೆಯಲ್ಲಿ ಶರತ್, ಮಹೇಶ್, ಪುಷ್ಪಾ ಮತ್ತು ಪವಿತ್ರ ತಂಡ ಪ್ರಥಮ, ಕೀರ್ತನ - ದೀಕ್ಷಾ ತಂಡ ದ್ವಿತೀಯ, ಅಮೃತ, ಸಂಜನ, ಅನನ್ಯ ತಂಡ ತೃತೀಯ ಬಹುಮಾನ ಪಡೆಯಿತು. ಸುಶ್ಮಾ ಸ್ವಾಗತಿಸಿದರು. ಉಶಾ ವಂದಿಸಿದರು. ಶ್ರೇಯಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.