ADVERTISEMENT

ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 14:51 IST
Last Updated 19 ಆಗಸ್ಟ್ 2024, 14:51 IST
ಉಡುಪಿಯ ಬ್ರಹ್ಮಗಿರಿ ವೃತ್ತದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು
ಉಡುಪಿಯ ಬ್ರಹ್ಮಗಿರಿ ವೃತ್ತದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು   

ಉಡುಪಿ: ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ನಗರದ ಬ್ರಹ್ಮಗಿರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ‘ರಾಜ್ಯಪಾಲರು ಸಂವಿಧಾನವನ್ನು ಗಾಳಿಗೆ ತೂರಿ, ಮುಖ್ಯಮಂತ್ರಿ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ. ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿಯನ್ನಾಗಿಸುವ ಪ್ರಯತ್ನ ಯಶಸ್ವಿಯಾಗಲು ನಾವು ಬಿಡುವುದಿಲ್ಲ. ನ್ಯಾಯಾಂಗದ ಮೇಲೆ ನಮಗೆ ಭರವಸೆ ಇದೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನವನ್ನು ಸಹಿಸುವುದಿಲ್ಲ’ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ‘ರಾಜ್ಯಪಾಲರು ಅಮಿತ್‌ ಶಾ ಅವರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧ ಅವರು ಪ್ರಾಸಿಕ್ಯೂಷ್‌ನ್‌ಗೆ ಅನುಮತಿ ನೀಡಲಿ’ ಎಂದರು. ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ ಕುಮಾರ್ ಕೊಡವೂರು, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಮಂಜುನಾಥ ಭಂಡಾರಿ, ಪ್ರಸಾದ್ ರಾಜ್ ಕಾಂಚನ್, ಉದಯ ಕುಮರ್ ಶೆಟ್ಟಿ ಮುನಿಯಾಲು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ ಪಾಲ್ಗೊಂಡಿದ್ದರು.

ಕಾಂಗ್ರೆಸ್ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜೋಡುಕಟ್ಟೆಯವರೆಗೆ ಸಾಗಿ, ಮತ್ತೆ ಬ್ರಹ್ಮಗಿರಿ ವೃತ್ತಕ್ಕೆ ಮರಳಿ ಸಮಾರೋಪಗೊಂಡಿತು.

ಉಡುಪಿಯ ಬ್ರಹ್ಮಗಿರಿ ವೃತ್ತದ ಬಳಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು

ಅನುಮತಿ ಕೂಡಲೇ ವಾಪಸ್‌ ಪಡೆಯಲಿ: ಹೆಗ್ಡೆ

ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೊದಲು ರಾಜ್ಯಪಾಲರು ಆ ವಿಚಾರದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಕಾನೂನು ತಜ್ಞರ ಸಲಹೆ ಪಡೆಯಬೇಕಿತ್ತು. ಆದರೆ ಅವರು ಆ ರೀತಿ ಮಾಡಿಲ್ಲ. ಅನುಮತಿ ನೀಡಿರುವುದನ್ನು ಅವರು ಕೂಡಲೇ ವಾಪಸ್‌ ಪಡೆಯಬೇಕು ಎಂದು ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ರಾಜಕೀಯದ ಕೊನೆ ದಿನಗಳಲ್ಲಿ ಅವರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕಿ ಇಡುವ ಪ್ರಯತ್ನ ಮಾಡಲಾಗುತ್ತಿದೆ. ಇದರಲ್ಲಿ ಬಿಜೆಪಿ ಯಶಸ್ವಿಯಾಗಲಾರದು ಎಂದರು. 1984ರಿಂದಲೂ ಸಿದ್ದರಾಮಯ್ಯ ಅವರ ಜೊತೆ ಕೆಲಸ ಮಾಡಿದ್ದೇನೆ. ಅವರು ಹಣಕಾಸು ಸಚಿವರಾಗಿದ್ದಾಗ ಮಾಡಿರುವ ಕೆಲಸಗಳಿಂದ ಹಿಂದುಳಿದ ವರ್ಗ ಮೀನುಗಾರರಿಗೆ ಅನುಕೂಲವಾಗಿತ್ತು ಎಂದು ಹೇಳಿದರು.

ಶಾಸಕ ಸುನೀಲ್‌ ಕುಮಾರ್‌ ಅವರು ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ನೈತಿಕತೆ ಇದ್ದವರು ರಾಜೀನಾಮೆ ಕೇಳಲಿ. ಪರಶುರಾಮ ಮೂರ್ತಿ ಪ್ರಕರಣದಲ್ಲಿ ಸುನೀಲ್‌ ಅವರ ವಿರುದ್ಧ ಆರೋಪಗಳಿವೆ ಎಂದರು. ರಾಜ್ಯಪಾಲರ ನಡೆಯನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.