ADVERTISEMENT

ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ: ಪ್ರಮೋದ್‌ ಮಧ್ವರಾಜ್‌

ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 14:47 IST
Last Updated 19 ಆಗಸ್ಟ್ 2024, 14:47 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು   

ಉಡುಪಿ: ಮುಡಾ ಹಗರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಬಯಲಿಗೆ ಬಂದಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡ ಪ್ರಮೋದ್‌ ಮಧ್ವರಾಜ್‌ ಆಗ್ರಹಿಸಿದರು.

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ ಅವರ ಭಾಮೈದ ಜಾಗ ಖರೀದಿಸಿದ್ದರು. ಇದು ಸಿದ್ದರಾಮಯ್ಯ ಅವರ ಹಣದಿಂದಲೇ ಖರೀದಿ ಮಾಡಿದ್ದು ಎಂಬ ಸಂಶಯ ಕಾಡುತ್ತಿದೆ ಎಂದರು.

ADVERTISEMENT

ಮುಖ್ಯಮಂತ್ರಿ ಕುಟುಂಬಕ್ಕೆ ಸೇರಿದ 3 ಎಕರೆ 16 ಸೆಂಟ್ಸ್ ಜಾಗವನ್ನು ಅಧಿಕಾರಿಗಳು ಕಬಳಿಸಿದ್ದು ಗೊತ್ತಾಗದಿದ್ದರೆ ಅವರು ಮುಖ್ಯಮಂತ್ರಿಯಾಗಲೂ ಯೋಗ್ಯರಲ್ಲ ಎಂದು ಟೀಕಿಸಿದರು.

ಅಧಿಕಾರಿಗಳು ಜಾಗ ಕಬಳಿಸಿದ್ದರೆ ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಮಧ್ವರಾಜ್‌ ಪ್ರಶ್ನಿಸಿದರು.

ನಾವು ಹೋರಾಟ ಮುಂದುವರಿಸಿದರೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕಾಗುತ್ತದೆ ಮತ್ತು ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಲು ಮಲ್ಲಿಕಾರ್ಜುನ ಖರ್ಗೆ ಅವರು ಕಾಯುತ್ತಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ ಮಾತನಾಡಿ, ಸಿದ್ದರಾಮಯ್ಯ ಅವರ ಬಣ್ಣ ಈಗ ಬಯಲಾಗುತ್ತಿದೆ. ಹಿಂದೆ ಬಿ.ಎಸ್. ಯಡಿಯೂರಪ್ಪನವರು ಇದೇ ಪರಿಸ್ಥಿತಿಯಲ್ಲಿದ್ದಾಗ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದರು. ಈಗ ಅವರು ಯಾಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಹೇಳಿದರು.

ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಿದ್ದರಾಮಯ್ಯ ಅವರು ಕುಟುಂಬದ ಉದ್ದಾರಕ್ಕಾಗಿಯೇ ಮುಖ್ಯಮಂತ್ರಿಯಾಗಿದ್ದಾರೆಯೇ ಎಂಬ ಸಂಶಯ ಕಾಡುತ್ತಿದೆ ಎಂದರು.

ಪಕ್ಷದ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ , ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.