ADVERTISEMENT

ಉಡುಪಿ | ಜನಪದ ಕಲೆ ತುಳುನಾಡಿನ ಜೀವಾಳ: ಡಾ.ತುಕಾರಾಮ ಪೂಜಾರಿ

ಗುಂಡ್ಮಿ ಸದಾನಂದ ಜಾನಪದ ಉತ್ಸವ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 5:52 IST
Last Updated 20 ಡಿಸೆಂಬರ್ 2022, 5:52 IST
ಉಡುಪಿಯ ಕಲಾಮಯಂ ತಂಡದವರ ವೈವಿಧ್ಯಮಯ ಜಾನಪದ ಕಲಾಪ್ರಕಾರಗಳ ಪ್ರದರ್ಶನ ಗಮನ ಸೆಳೆಯಿತು
ಉಡುಪಿಯ ಕಲಾಮಯಂ ತಂಡದವರ ವೈವಿಧ್ಯಮಯ ಜಾನಪದ ಕಲಾಪ್ರಕಾರಗಳ ಪ್ರದರ್ಶನ ಗಮನ ಸೆಳೆಯಿತು   

ಸಾಲಿಗ್ರಾಮ(ಬ್ರಹ್ಮಾವರ): ಜನಪದ ಕಲೆಗಳು ತುಳುನಾಡಿನ ಜನರ ಜೀವಾಳವಾಗಿವೆ. ಈ ಮಣ್ಣಿನ ಮೌಖಿಕ ಸಾಹಿತ್ಯ, ಭೌತಿಕ ವಸ್ತು, ಧಾರ್ಮಿಕ ಸಾಂಸ್ಕೃತಿಕ ಆಚರಣೆಗಳು ಹಾಗೂ ರಂಗಕಲೆಗಳನ್ನು ಅಧ್ಯಯನ ಮಾಡಿದರೆ ಒಂದು ಪ್ರದೇಶದ ಸಮಗ್ರ ಇತಿಹಾಸವನ್ನು ಕಟ್ಟಿಕೊಡಬಹುದು ಎಂದು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಹೇಳಿದರು.

ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲೆ, ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮತ್ತು ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕೇಂದ್ರದ ಆಶ್ರಯದಲ್ಲಿ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗಮಂಟಪದಲ್ಲಿ ಭಾನುವಾರ ನಡೆದ ಜಾನಪದ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಪಾಡ್ದನಗಳು, ಗಾದೆ ಮಾತುಗಳು, ಹಿರಿಯರು ಬಳಸಿದ ಕೃಷಿ ಪರಿಕರಗಳನ್ನು ಅಧ್ಯಯನ ಮಾಡಿದರೆ ತುಳುನಾಡಿನ ಸಂಸ್ಕೃತಿಯ ಇತಿಹಾಸವನ್ನು ಅರಿಯಬಹುದು. ನಮ್ಮ ಹಿರಿಯರು ಅಶಿಕ್ಷಿತರಾಗಿದ್ದರೂ ಅವರ ಜ್ಞಾನ ಭಂಡಾರ ಅಗಾಧವಾಗಿತ್ತು ಎನ್ನುವುದಕ್ಕೆ ಜನಪದ ಕಲೆ ಮತ್ತು ಕಲಾವಿದರೇ ಸಾಕ್ಷಿ. ಬ್ರಿಟಿಷರ ಕಾಲದಲ್ಲಿ 2,000 ಹುಲಿಗಳನ್ನು ಬೇಟೆಯಾಡಿದ ಫಕೀರ ಗೌಡ, ಸುಬ್ಬಯ್ಯ ಶೆಟ್ರ ವಹಿವಾಟು, ರಾಣಿ ಅಬ್ಬಕ್ಕ, ಹಿರಿಯರು ಬಳಸುತ್ತಿದ್ದ ಸಾವಿರಾರು ವಸ್ತುಗಳು ಹೀಗೆ ಇವೆಲ್ಲದಕ್ಕೂ ತುಳುನಾಡಿನ ಸಾಂಸ್ಕೃತಿಕ ಹಿನ್ನೆಲೆಯಿದ್ದು, ಸಮಗ್ರ ಅಧ್ಯಯನ ನಡೆಸಬೇಕಾಗಿದೆ ’ ಎಂದರು.

ADVERTISEMENT

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ‘ಜಾನಪದ ಕಲೆಗಳು ಕೇವಲ ಆರಾಧನಾ ಕಲೆಗಳಾಗಿ ನಶಿಸಿ ಹೋಗಬಾರದು. ಅವುಗಳನ್ನು ಜನಾಕರ್ಷಣೆಯ ಕಲಾಪ್ರಾಕಾರಗಳನ್ನಾಗಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ಜನಪದ ಉತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾಡಿನ ವಿವಿಧ ಸಂಘ –ಸಂಸ್ಥೆಗಳು ಇದಕ್ಕೆ ಕೈ ಜೋಡಿಸಲು ಮುಂದಾಗಬೇಕು’ ಎಂದರು.

ಕರಾವಳಿಯ ಜನಪದ ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಸಾಂಪ್ರಾದಾಯಿಕ ಕಂಬಳ ಆಚರಣೆಯನ್ನು ಉಳಿಸಿ ಬೆಳೆಸಲು ಸರ್ಕಾರ ಅನುದಾನ ನೀಡಬೇಕು.‌ ಎಂದು ಬೈಂದೂರು ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಎಂದರು.

ಕುಂದಾಪುರ ಮತ್ತು ಬೈಂದೂರು ತಾಲ್ಲೂಕು ಕಂಬಳ ಸಮಿತಿಯ ಅಧ್ಯಕ್ಷ ಸಸಿಹಿತ್ಲು ವೆಂಕಟ ಪೂಜಾರಿ ಅವರಿಗೆ ಜಾನಪದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ, ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷ ಎಚ್.ಸುದರ್ಶನ ಹೆಗ್ಡೆ, ಜಿಲ್ಲಾ ಖಜಾಂಚಿ ಕೆ.ಜಯರಾಮ ಆಚಾರ್ಯ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿಗಳಾದ ಗಿರಿಜಾ ತಲ್ಲೂರು, ಶಿವರಾಮ ಶೆಟ್ಟಿ ಹಾಗೂ ತಲ್ಲೂರು ಶಿವಪ್ರಸಾದ್ ಶೆಟ್ಟಿ ಇದ್ದರು.

ಜಾನಪದ ಪರಿಷತ್ತಿನ ಉಡುಪಿ ತಾಲ್ಲೂಕು ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ರಾಜಶೇಖರ ಹೆಬ್ಬಾರ್ ವಂದಿಸಿದರು. ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ನಂತರ ಉಡುಪಿಯ ಕಲಾಮಯಂ ತಂಡದವರಿಂದ ವೈವಿಧ್ಯಮಯ ಜಾನಪದ ಕಲಾಪ್ರಕಾರಗಳ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.