ADVERTISEMENT

ಕೊರೊನಾದಿಂದ ಸಾವು: ಹಗಲು ಹೊತ್ತಿನಲ್ಲಿ ಶವದ ಮುಖ ತೋರಿಸಿದ ನಂತರವೇ ಹಸ್ತಾಂತರ

ಕುಂದಾಪುರ ವ್ಯಕ್ತಿಯ ಶವ ಅದಲು ಬದಲು ಪ್ರಕರಣ; ಹೊಸ ನಿಯಮಗಳು ಜಾರಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 15:43 IST
Last Updated 24 ಆಗಸ್ಟ್ 2020, 15:43 IST
   

ಉಡುಪಿ: ಕುಂದಾಪುರ ತಾಲ್ಲೂಕಿನ 60 ವರ್ಷದ ಕೋವಿಡ್‌ ಸೋಂಕಿತ ವ್ಯಕ್ತಿಯ ಶವ ಅದಲು ಬದಲಾದ ಪ್ರಕರಣದಲ್ಲಿ ಜಿಲ್ಲಾ ಆಸ್ಪತ್ರೆಯ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲು ಗೃಹ ಸಚಿವರ ಜತೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಶಾಸಕ ರಘುಪತಿ ಭಟ್‌ ತಿಳಿಸಿದರು.

ಸೋಮವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ‘ಶವ ಅದಲು ಬದಲು ಪ್ರಕರಣ ಗಂಭೀರವಾಗಿದ್ದು, ಜಿಲ್ಲಾಡಳಿತ ತಲೆ ತಗ್ಗಿಸುವಂತಾಗಿದೆ. ಮುಂದೆ, ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಲು ಗೃಹ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ, ಶವ ಹಸ್ತಾಂತರ ವೇಳೆ ಕಡ್ಡಾಯವಾಗಿ ಪಾಲಿಸಬೇಕಾದ ಕ್ರಮಗಳ ಕುರಿತು ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ತೀರ್ಮಾನಗಳೇನು ?

ADVERTISEMENT

ಇನ್ನು ಮುಂದೆಕೋವಿಡ್‌ನಿಂದ ಮೃತಪಟ್ಟವರ ಶವವನ್ನು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಮಾತ್ರ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಶವ ಕೊಡುವಾಗ ಸಂಬಂಧಪಟ್ಟ ತಾಲ್ಲೂಕಿನ ವೈದ್ಯಕೀಯ ಅಧಿಕಾರಿ ಹಾಜರಿರಬೇಕು. ಅಂತ್ಯಕ್ರಿಯೆ ಮುಗಿಯುವವರೆಗೂ ಉಪಸ್ಥಿತರಿರಬೇಕು. ಶವವನ್ನು ಕುಟುಂಬ ಸದಸ್ಯರಿಗೆ ತೋರಿಸಿ ಅವರಿಂದ ದೃಢೀಕರಣ ಪಡೆದ ಬಳಿಕವೇ ಹಸ್ತಾಂತರಿಸಬೇಕು. ‘ಡಿ’ ದರ್ಜೆ ನೌಕರ ಶವ ಕೊಡುವಂತಿಲ್ಲ; ಬದಲಾಗಿ ವೈದ್ಯಕೀಯ ಅಧಿಕಾರಿ ಹಸ್ತಾಂತರ ಮಾಡಬೇಕು ಎಂಬ ನಿಯಮ ಜಾರಿಗೆ ನಿರ್ಧರಿಸಲಾಗಿದೆ ಎಂದರು.

ಕೋವಿಡ್‌ ಪರೀಕ್ಷೆ ಸುಳ್ಳು, ಹಣ ಮಾಡಲು ನೆಗೆಟಿವ್, ಪಾಸಿಟಿವ್ ನಾಟಕ ಮಾಡಲಾಗುತ್ತಿದೆ ಎಂದು ಕೆಲವರು ಜಾಲತಾಣಗಳಲ್ಲಿ ವದಂತಿ ಸೃಷ್ಟಿಸುತ್ತಿದ್ದಾರೆ. ರ‍್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದರೂ ರೋಗ ಲಕ್ಷಣಗಳಿದ್ದರೆ ಆರ್‌ಟಿ–ಪಿಸಿಆರ್‌ ಪರೀಕ್ಷೆಯಲ್ಲಿ ಪಾಸಿಟಿವ್ ಬರುತ್ತದೆ. ಇದನ್ನು ಅಕ್ರಮ ಎನ್ನಲಾಗುವುದಿಲ್ಲ. ಹಣಕ್ಕಾಗಿ ಯಾರೂ ವರದಿ ಬದಲಾಯಿಸುತ್ತಿಲ್ಲ. ಯಾರಿಗೂ ಕಮಿಷನ್‌ ಹೋಗುತ್ತಿಲ್ಲ ಎಂದು ಶಾಸಕರು ತಿಳಿಸಿದರು

ಸೋಂಕು ತಡೆಗೆ ಕೋವಿಡ್‌ ಪರೀಕ್ಷೆಯನ್ನು ಹೆಚ್ಚು ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ಐಸಿಎಂಆರ್ ಸೂಚನೆ ನೀಡಿದೆ. ಅದರಂತೆ, ರೋಗ ಲಕ್ಷಣ ಕಂಡುಬಂದ ಎಲ್ಲರಿಗೂ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಅವರ ಮಾನಸಿಕ ಸ್ಥೈರ್ಯವನ್ನು ಕುಂದಿಸುವ ಕೆಲಸವನ್ನು ಯಾರೂ ಮಾಡಬಾರದು. ವಿರೋಧ ಪಕ್ಷದ ನಾಯಕರು ಕೂಡ ಕೋವಿಡ್‌ ವಿಚಾರದಲ್ಲಿ ರಾಜಕೀಯ ಮಾಡಬಾರದು. ಮುಂದೆ, ವೈದ್ಯಕೀಯ ಸೇವೆ ವ್ಯತ್ಯಯವಾಗಲು ಅವಕಾಶ ಕೊಡಬಾರದು. ನಾಗರಿಕರಿಗೆ ಗೊಂದಲಗಳಿದ್ದರೆ ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.