ADVERTISEMENT

‘ಅಭಿವೃದ್ಧಿ ಸಹಿಸದ ಕಾಂಗ್ರೆಸ್’

ಅಮೃತ ಮಹೋತ್ಸವದ ಪೂರ್ವಭಾವಿ ಸಭೆ: ಸಚಿವ ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 5:20 IST
Last Updated 9 ಆಗಸ್ಟ್ 2022, 5:20 IST
ಕಾರ್ಕಳದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿದರು.
ಕಾರ್ಕಳದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿದರು.   

ಕಾರ್ಕಳ: ‘ಕ್ಷೇತ್ರದ ಅಭಿವೃದ್ಧಿ ಸಹಿಸದೆ ಕಾರ್ಕಳ ಉತ್ಸವಕ್ಕೆ, ಎಣ್ಣೆಹೊಳೆ ಏತನೀರಾವರಿ ಯೋಜನೆಗೆ ಹೀಗೆ ಪ್ರತಿ ಅಭಿವೃದ್ಧಿ ಕಾರ್ಯಕ್ಕೂ ಕಾಂಗ್ರೆಸ್ ವಿರೋಧ ವ್ಯಕ್ತ ಪಡಿಸುತ್ತಿದೆ’ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಇಲ್ಲಿನ ಮಂಜುನಾಥ ಪೈ ಸಭಾಭವನದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನೂ ಕಾಂಗ್ರೆಸ್ ಟೀಕೆಗೆ ಬಳಸುತ್ತಿದೆ ಇದನ್ನು ನೋಡಿ ಸುಮ್ಮನಿರುವುದು ಅಸಾಧ್ಯ. ನಾಲ್ಕು ದಶಕ ಕಾರ್ಕಳದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಕಾರ್ಕಳದ ಅಭಿವೃದ್ಧಿಯ ಕುರಿತು ಯೋಚನೆಯೇ ಮಾಡಿಲ್ಲ’ ಎಂದು ಆರೋಪಿಸಿದರು.
‘ಕಾಂಗ್ರೆಸ್‌ಗೆ ದೇಶ, ರಾಷ್ಟ್ರ ಧ್ವಜದ ಮೇಲೆ ಗೌರವ ಇಲ್ಲ. ಬಿಜೆಪಿ ಅಧಿಕಾರದ ಸಂದರ್ಭದಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ಒಂದಿಂಚೂ ಜಾಗವನ್ನೂ ಬಿಟ್ಟುಕೊಡಲಿಲ್ಲ. ಇದನ್ನು ಯಾರೂ ಮರೆಯುವಂತಿಲ್ಲ’ ಎಂದರು.

ಕಾರ್ಕಳ ಹೆಬ್ರಿ ಉಭಯ ತಾಲ್ಲೂಕಿನ 46 ಸಾವಿರ ಮನೆ, 5 ಸಾವಿರ ಅಂಗಡಿಗಳಲ್ಲೂ ರಾಷ್ಟ್ರಧ್ವಜ ರಾರಾಜಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಕಳಕ್ಕೆ ಈಗಾಗಲೇ ಸರ್ಕಾರದಿಂದ 40 ಸಾವಿರ ಧ್ವಜ ಬಂದಿದೆ ಎಂದು ಸುನೀಲ್ ಕುಮಾರ್ ಹೇಳಿದರು.

ADVERTISEMENT

ವಕೀಲ ಎಂ.ಕೆ. ವಿಜಯ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಬಿಜೆಪಿ ಕ್ಷೇತ್ರ ಘಟಕದ ಅಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿದರು. ರೇಶ್ಮಾ ಉದಯ ಶೆಟ್ಟಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯರಾಮ ಸಾಲ್ಯಾನ್ ಇದ್ದರು.

ಜ್ಯೋತಿ ರಮೇಶ್ ವಂದೇ ಮಾತರಂ ಹಾಡಿದರು. ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಸ್ವಾಗತಿಸಿದರು. ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಸುಹಾಸ್ ಶೆಟ್ಟಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.