ADVERTISEMENT

ಮಣ್ಣಿನ ಮಕ್ಕಳ ಜಗತ್ತು, ಬದುಕು ಭಾವಗಳ ಗತ್ತು ಮಳೆ ಮೆರುಗಿನ ಹಳ್ಳಿಮನೆ ಕಣ್ಮರೆ

ಸಂದೇಶ್ ಶೆಟ್ಟಿ ಆರ್ಡಿ
Published 8 ಆಗಸ್ಟ್ 2018, 16:53 IST
Last Updated 8 ಆಗಸ್ಟ್ 2018, 16:53 IST
hallimane
hallimane   

ಕೃಷಿ ಸಂಸ್ಕೃತಿಯಲ್ಲಿ ಬೆಳೆದ ರೈತರು ಆಧುನಿಕ ಯುಗದ ತಂತ್ರಜ್ಞಾನಗಳಿಗೆ ಅನಿವಾರ್ಯವಾಗಿ ಹೊಂದಿಕೊಳ್ಳುತ್ತಿದ್ದಾರೆ. ಕೃಷಿ ಬದುಕಿನ ಸುಂದರ ಕ್ಷಣ, ಪ್ರಕೃತಿ ಸೌಂದರ್ಯ, ಗದ್ದೆ ಬೇಸಾಯದ ಸೊಬಗು ಮರೆಯಾಗುವ ಕಾಲಘಟ್ಟಕ್ಕೆ ನಾವಿಂದು ತಲುಪಿದ್ದೇವೆ. ಅದರಲ್ಲೊಂದು ಮೆರುಗಿನ ಅರಮನೆ– ಹಳ್ಳಿಮನೆ.

ಮಳೆಗಾಲ ಆರಂಭವಾದೊಡನೆ ಕೃಷಿ ಕಾರ್ಯದಲ್ಲಿ ಮಗ್ನವಾಗುವ ರೈತನು ತಾನು ಬೆಳೆದ ಬೆಳೆಗಳ ರಕ್ಷಣೆಯಲ್ಲಿ ಹಾಸುಹೊಕ್ಕಾಗಿರುವ ಹಳ್ಳಿಮನೆಯ ಪಾತ್ರ ಬಹಳಷ್ಟಿದೆ. ರೈತರ ಕೃಷಿ ಬದುಕಿನ ಭಾಗವಾಗಿದ್ದ ಮಳೆಗಾಲದ ಮೆರುಗಿನ ಅರಮನೆ ಹಳ್ಳಿಮನೆ ಕಣ್ಮರೆಯಾಗಿದೆ.

ಮುಂಗಾರು ಆರಂಭವಾದೊಡನೆ ರೈತರಿಗೆ ಎಲ್ಲಿಲ್ಲದ ಕೆಲಸ. ಮಣ್ಣು ಹದಗೊಳಿಸುವುದು, ಬೀಜ ಬಿತ್ತನೆ, ನಾಟಿ, ಕಳೆಕೀಳುವುದು ಇತ್ಯಾದಿ ಕೃಷಿ ಚಟುವಟಿಕೆ! ಅಂತೆಯೇ ಕಾಡುಪ್ರಾಣಿ, ಪಕ್ಷಿಗಳ ಉಪಟಳದಿಂದ ತಾವು ಕಷ್ಟಪಟ್ಟು ಬೆಳೆದ ಭತ್ತದ ಕೃಷಿ ರಕ್ಷಣೆಗಾಗಿ ಗದ್ದೆ ಅಂಚಿನಲ್ಲಿ ಹಳ್ಳಿಮನೆ ರಚಿಸುವ ಕಾರ್ಯ. ಹಗಲು ಹೊತ್ತಿನಲ್ಲಿ ಗದ್ದೆ ಬದಿಯಲ್ಲಿಯೆ ಕಾಲಕಳೆಯುವ ರೈತಾಪಿ ವರ್ಗ ರಾತ್ರಿಯೂ ಕೂಡ ಹಳ್ಳಿಮನೆಯಲ್ಲಿ ಠಿಕಾಣಿ ಹೂಡುತ್ತಿದ್ದರು. ವೈಜ್ಞಾನಿಕ ಯುಗದಲ್ಲಿ ಹಳ್ಳಿಮನೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ ನೇಪಥ್ಯಕ್ಕೆ ಸರಿಯುವ ಹಂತದಲ್ಲಿದೆ.

ಕೃಷಿ ಚಟುವಟಿಕೆಯನ್ನೆ ಜೀವನಾಧಾರವಾಗಿರಿಸಿಕೊಂಡ ರೈತಾಪಿ ವರ್ಗಗಳು ಗದ್ದೆಯ ಅಂಚಿನಲ್ಲಿ ನಿರ್ಮಿಸುವ ಹಳ್ಳಿಮನೆ ನೋಡುವುದಕ್ಕೆ ಮುದನೀಡುತ್ತಿತ್ತು. ಗದ್ದೆ ಅಂಚುಗಳ ಪಕ್ಕದಲ್ಲಿ ಎತ್ತ ಕಣ್ಣುಹಾಯಿಸಿದರೂ ಕೂಡ ಹಳ್ಳಿಮನೆಗಳ ಸೊಬಗು ಆಕರ್ಷಣಿಯವಾಗಿತ್ತು. ಸಾಮಾನ್ಯವಾಗಿ ಹಳ್ಳಿಮನೆಗೆ ಹೆಂಚುಗಳನ್ನು ಬಳಸುತ್ತಾರೆ. ಇಲ್ಲದಿದ್ದರೆ ಹುಲ್ಲು ಅಥವಾ ತೆಂಗಿನ ಗರಿಯೊಂದಿಗೆ ಟರ್ಪಾಲು ಕಟ್ಟುವ ಮೂಲಕ ಮನೆಯೊಳಗೆ ನೀರು ಸುರಿಯದಂತೆ ತಡೆಯುತ್ತಾರೆ. ಅಟ್ಟಣಿಗೆ ರಚಿಸಿ ಅದರಲ್ಲಿ ಮಲಗಲು ವ್ಯವಸ್ಥೆಯೊಂದಿಗೆ ಸುತ್ತಲೂ ನೀರು ಬೀಳದಂತೆ ವ್ಯವಸ್ಥೆ ಮಾಡಿರುತ್ತಾರೆ. ಕೃಷಿಭೂಮಿಯಲ್ಲಿ ಕಟ್ಟಡ ತಲೆಯೆತ್ತಿದ ಪರಿಣಾಮ ಕಿರುಮನೆಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಕೃಷಿ ಕೂಲಿಯಾಳು ಸಮಸ್ಯೆ ಹಾಗೂ ಹಗಲು ರಾತ್ರಿಯೆನ್ನದೆ ಕೃಷಿಭೂಮಿಗೆ ನುಗ್ಗುತ್ತಿರುವ ಕಾಡುಪ್ರಾಣಿಗಳ ಹಾವಳಿಯಿಂದ ಕಂಗೆಟ್ಟ ರೈತ ಕೃಷಿಯಿಂದ ವಿಮುಖನಾಗಿ ದಿನಗೂಲಿ ನೌಕರನಾಗಿ ದುಡಿಯುತ್ತಿರುವ ಪರಿಣಾಮ ಮಣ್ಣಿನ ಮಕ್ಕಳ ಮೆರುಗಿನ, ಬೆರಗಿನ ಅರಮನೆ ನೇಪಥ್ಯಕ್ಕೆ ಸರಿಯುವಂತಾಗಿದೆ.

ADVERTISEMENT

ಒಬ್ಬರಿಗೆ ಮಾತ್ರ ಮಲಗುವಷ್ಟು ಜಾಗವಿರುವ ಹಳ್ಳಿಮನೆಯಲ್ಲಿ ದೊಡ್ಡದಾದ ಘಂಟೆಯೊ ಅಥವಾ ಜಾಗಟೆ ಇಟ್ಟುಕೊಂಡಿರುತ್ತಾರೆ. ರಾತ್ರಿ ಸಮಯದಲ್ಲಿ ಅದನ್ನು ಬಾರಿಸುತ್ತಾ ಗದ್ದೆಗೆ ಕಾಡುಪ್ರಾಣಿಗಳು ನುಗ್ಗದಂತೆ ಕಾಯುತ್ತಾರೆ. ರಾತ್ರಿ ಕಳೆಯಲು ರೈತರು ಒಂದಾಗಿ ತಾವು ತಂದಿರುವ ತಿಂಡಿ ತಿನಿಸುಗಳನ್ನು ಹಂಚಿಕೊಂಡು ತಿನ್ನುವ ಮೂಲಕ ಬ್ರಾತೃತ್ವದ ಸವಿ ಉಣ್ಣುತ್ತಿದ್ದರು. ಹಸಿವು ನೀಗುವುದರೊಂದಿಗೆ ಕಷ್ಟ ಸುಖ ಹಂಚಿಕೊಳ್ಳುವ ವೇದಿಕೆಯಾಗಿ ನಿರ್ಮಾಣವಾಗುತ್ತಿತ್ತು. ಪ್ರಚಲಿತ ವಿದ್ಯಮಾನ, ರಾಜಕೀಯ ಚರ್ಚೆ, ಕೃಷಿಗೆ ಸಂಬಂಧಿಸಿದ ಮಾಹಿತಿ ಪರಸ್ಪರ ಹಂಚಿಕೊಳ್ಳುವ ರೈತರಲ್ಲಿ ಸಹೋದರತ್ವ ಪಡಿಮೂಡುತ್ತಿತ್ತು. ಮನರಂಜನೆಗಾಗಿ ಚನ್ನೆಮಣೆ, ಕಾರ್ಡ್ಸ್ ಇತ್ಯಾದಿ ಆಟವಾಡುವ ಅಂಗಳವಾಗಿತ್ತು. ಭತ್ತದ ಕಟಾವು ಆಗುವವರೆಗೆ ಹಳ್ಳಿಮನೆಯಲ್ಲಿ ವಾಸಮಾಡುವ ರೈತನಿಗೆ ಅದುವೆ ತವರು ಮನೆಯಾಗಿತ್ತು.

ರೈತ ಭತ್ತದ ಕೃಷಿ ನಾಟಿ ಮಾಡಿದ ದಿನದಿಂದ ಕಠಾವು ಮಾಡುವವರೆಗೆ ಮನೆಬಿಟ್ಟು ಹಳ್ಳಿಮನೆ ವಾಸ ಅನಿವಾರ್ಯವಾಗಿತ್ತು. ಮಳೆ, ಗುಡುಗು-ಸಿಡಿಲಿನ ಆರ್ಭಟದ ನಡುವೆ ಕೃಷಿಗೆ ದಾಳಿಮಾಡುವ ಕಾಡುಪ್ರಾಣಿಗಳ ಉಪಟಳ ತಪ್ಪಿಸಿಕೊಳ್ಳಲು ರಾತ್ರಿ ಸಮಯದಲ್ಲಿ ಜಾಗರಣೆ ಮಾಡುತ್ತಿದ್ದ. ಕಷ್ಟಪಟ್ಟು ದುಡಿದ ಭತ್ತದ ಕೃಷಿ ಕಾಡುಪ್ರಾಣಿಗಳ ಹಾವಳಿಗೆ ತುತ್ತಾಗಬಾರದು ಎನ್ನುವ ಇರಾದೆಯಾಗಿತ್ತು. ಮನೆಯ ಯಜಮಾನನಿಗೆ ರಾತ್ರಿ ಹೊತ್ತಿನಲ್ಲಿ ಆಶ್ರಯ ನೀಡುತ್ತಿದ್ದ ಹಳ್ಳಿಮನೆ, ಶಾಲಾ-ಕಾಲೇಜುಗಳಿಗೆ ರಜೆಯಿದ್ದಾಗ ಮನೆಯ ಮಕ್ಕಳಿಗೆ ಓದಲು ಬರೆಯುವ ಸುಂದರ ತಾಣವಾಗಿತ್ತು. ಹಸಿರು ಪ್ರಕೃತಿಯ ರಮಣೀಯ ಸೌಂದರ್ಯದ ಸವಿ ಅನುಭವಿಸುತ್ತಾ, ಝುಳು ಝುಳು ಹರಿಯುವ ನೀರಿನ ಸದ್ದಿನಲಿ, ಓಡಾಡುವ ಮೀನುಗಳ ಚೆಂದವನ್ನು ನೋಡುತ್ತಾ ಮಕ್ಕಳಿಗೆ ಆಟವಾಡುವ ಮನೆಯಾಗಿತ್ತು. ಬೇಸರ ಕಳೆಯುವುದರೊಂದಿಗೆ, ಕಾಡುಪ್ರಾಣಿ, ಪಕ್ಷಿಗಳಿಂದ ರಕ್ಷಣೆ ಪಡೆಯಲು ನಿರ್ಮಿಸಿದ ಹಳ್ಳಿಮನೆಯಲ್ಲಿರುವ ಘಂಟೆ-ಜಾಗಟೆ ಹೊಡೆಯುವುದೆ ಮಕ್ಕಳಿಗೆ ಮಜವೆನಿಸುತ್ತಿತ್ತು.

ಕಷ್ಟಪಟ್ಟು ದುಡಿದ ಭತ್ತದ ಕೃಷಿ ಕಾಡುಪ್ರಾಣಿಗಳ ಹಾವಳಿಗೆ ತುತ್ತಾಗಿ ಅರಣ್ಯ ಇಲಾಖೆಯಿಂದ ಪರಿಹಾರ ದೊರಕಿದರೂ ಸಹ ಕೃಷಿ ಇಲಾಖೆಯಿಂದ ಉತ್ತೇಜನ ಸಿಗುತ್ತಿದ್ದರೂ ಕೃಷಿ ಕೂಲಿಯಾಳು ಸಮಸ್ಯೆಯಿಂದಾಗಿ ರೈತ ಕೃಷಿಯಿಂದ ವಿಮುಖನಾಗುತ್ತಿದ್ದಾನೆ. ಪರಿಣಾಮ ಮುಂದಿನ ಪೀಳಿಗೆ ಸಂಗ್ರಹ ಚಿತ್ರದಲ್ಲಿ ಹಳ್ಳಿಮನೆಯ ಸೊಬಗು ನೋಡಬೇಕಿದೆ. ಆಧುನಿಕವಾಗಿ ಬೆಳೆಯುತ್ತಿದ್ದಂತೆ ಕೃಷಿಭೂಮಿಯಿಂದ ವಿಮುಖನಾದ ರೈತಾಪಿ ವರ್ಗದ ಹಿಂದೆಯೆ ಹಳ್ಳಿಮನೆಯ ಸೊಗಸು, ಸುಂದರ ಅನುಭವದ ಕಥನಗಳು ಕೂಡ ಕಾಲನ ಗರ್ಭದಲ್ಲಿ ಲೀನವಾಗುತ್ತಾ ಸಾಗುತ್ತಿರುವುದು ದುರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.