ADVERTISEMENT

ಕೆಎಂಸಿಗೆ ನೀಡಿದ್ದ ಅನುಮತಿ ಹಿಂಪಡೆದ ಐಸಿಎಂಆರ್‌

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿಲ್ಲ ಪ್ರಯೋಗಾಲಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 12:14 IST
Last Updated 28 ಮಾರ್ಚ್ 2020, 12:14 IST

ಉಡುಪಿ: ಕೋವಿಡ್‌–19 ಪ್ರಕರಣಗಳನ್ನು ಪತ್ತೆಹಚ್ಚಲು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ನೀಡಲಾಗಿದ್ದ ಅನುಮತಿಯನ್ನು ಕೇವಲ 48 ಗಂಟೆಯೊಳಗೆ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ ಹಿಂತೆಗೆದುಕೊಂಡಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಅನುಮತಿ ನೀಡುವ ಸಂಬಂಧ ಮಾರ್ಚ್‌ 24ರಂದು ಐಸಿಎಂಆರ್ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆ ಹೆಸರಿತ್ತು. 26ರಂದು ಹೊರಬಿದ್ದ ಪರಿಷ್ಕೃತ ಪಟ್ಟಿಯಲ್ಲಿ ಕೆಎಂಸಿ ಆಸ್ಪತ್ರೆಯನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕೆಎಂಸಿ ಆಸ್ಪತ್ರೆಯ ಹಿರಿಯ ಅಧಿಕಾರಿ, ‘ಪ್ರಯೋಗಾಲಯ ಸ್ಥಾಪನೆಗೆ ನೀಡಿದ್ದ ಅನುಮತಿಯನ್ನು ನಿರಾಕರಿಸಿರುವುದಕ್ಕೆ ಐಸಿಎಂಆರ್ ಕಾರಣಗಳನ್ನು ನೀಡಿಲ್ಲ. ಮತ್ತೆ ಅನುಮತಿ ಪಡೆಯಲು ಪ್ರಯತ್ನಗಳು ನಡೆಯುತ್ತಿವೆ’ ಎಂದರು.

ADVERTISEMENT

ಸದ್ಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಶಂಕಿತ ರೋಗಿಗಳ ಕಫ ಹಾಗೂ ರಕ್ತದ ಮಾದರಿ ಪರೀಕ್ಷಿಸಲು ಯಾವುದೇ ಪ್ರಯೋಗಾಲಯಗಳಿಲ್ಲ. ಮೂರೂ ಜಿಲ್ಲೆಗಳ ರೋಗಿಗಳ ಮಾದರಿಯನ್ನು ನೆರೆಯ ಶಿವಮೊಗ್ಗ ಹಾಗೂ ಹಾಸನಕ್ಕೆ ಕಳುಹಿಸಲಾಗುತ್ತಿದ್ದು, ವರದಿ ಬರಲು 2 ದಿನ ಕಾಯಬೇಕಿದೆ.

ಮಣಿಪಾಲದಲ್ಲಿ ಪ್ರಯೋಗಾಲಯ ಸ್ಥಾಪನೆಯಾದರೆ ಅದೇ ದಿನ ವರದಿ ಕೈಸೇರಲಿದ್ದು, ಕೊರೊನಾ ಸೋಂಕು ಹರಡುವಿಕೆ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುತ್ತಾರೆ ವೈದ್ಯರು. ಉಡುಪಿಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಜಗದೀಶ್‌ ಅವರು ಕೂಡ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹಲವು ಬಾರಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.