ADVERTISEMENT

ಅ. 4ಕ್ಕೆ ಅಂತರರಾಷ್ಟ್ರೀಯ ಇ–ಪೋಸ್ಟರ್‌ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 9:51 IST
Last Updated 1 ಅಕ್ಟೋಬರ್ 2019, 9:51 IST

ಉಡುಪಿ: ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವ ನಿಟ್ಟಿನಿಂದ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)ಯ ವಾಣಿಜ್ಯ ವಿಭಾಗದ ವತಿಯಿಂದ ಇದೇ 4ರಂದು ಮಣಿಪಾಲ ಕೆಎಂಸಿಯ ಡಾ. ಟಿಎಂಎ ಪೈ ಹಾಲ್‌ನಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಮಟ್ಟದ ಇ–ಪೋಸ್ಟರ್‌ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಮಾಹೆಯ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಂಕಿತಾ ಶೆಟ್ಟಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವು ಆಡಳಿತ ನಿರ್ವಹಣೆ, ವಾಣಿಜ್ಯ, ಆರೋಗ್ಯ ನಿರ್ವಹಣೆ, ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ, ವ್ಯವಹಾರ ವಿಶ್ಲೇಷಣೆ ಮುಂತಾದ ವಿಚಾರಗಳನ್ನು ಮಂಡಿಸಲು ಹಾಗೂ ಚರ್ಚಿಸಲು ಒಂದು ವೇದಿಕೆಯನ್ನು ಕಲ್ಪಿಸಿಕೊಡಲಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನೆಗಳನ್ನು ಮಂಡಿಸಲು, ಜ್ಞಾನ ವೃದ್ಧಿಸಲು ಹಾಗೂ ಪ್ರಸ್ತುತ ಸಂಶೋಧನೆಯಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಧೈರ್ಯ ತುಂಬುವುದು ಇದರ ಮೂಲ ಉದ್ದೇಶವಾಗಿದೆ ಎಂದರು.

ಸಮ್ಮೇಳನದಲ್ಲಿ ಫ್ರಾನ್ಸ್‌, ಅಪಘಾನಿಸ್ತಾನ, ನೆದರ್‌ಲ್ಯಾಂಡ್‌ ಸಹಿತ ದೇಶ ಹಾಗೂ ವಿದೇಶಗಳ 25 ಕಾಲೇಜುಗಳಿಂದ 150 ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಲಿದ್ದು, 150 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಇ–ಪೋಸ್ಟರ್‌ ಮೂಲಕ ಪ್ರಬಂಧ ಮಂಡಿಸಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ಅಂದು ಬೆಳಿಗ್ಗೆ 9.30ಕ್ಕೆ ನಿಟ್ಟೆ ಕೆ.ಎಸ್‌. ಹೆಗ್ಡೆ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ನಿರ್ದೇಶಕ ಡಾ. ಕೆ. ಶಂಕರನ್‌ ಸಮ್ಮೇಳನವನ್ನು ಉದ್ಘಾಟಿಸುವರು. ಮಾಹೆಯ ಸಹ ಉಪಕುಲಪತಿ ಡಾ. ಪಿ.ಎಲ್‌.ಎನ್‌ಜಿ. ರಾವ್‌ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಸಂದೀಪ್‌ ಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಪ್ರೊ. ಆದಿತ್ಯ ಶೆಟ್ಟಿ, ಸಹಾಯಕ ಹಿರಿಯ ಪ್ರಾಧ್ಯಾಪಕ ಪ್ರೊ. ರವೀಂದ್ರ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.