ADVERTISEMENT

ಜನಪರ ಉತ್ಸವದಲ್ಲಿ ಜನಪದ ಲೋಕ ಅನಾವರಣ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 16:15 IST
Last Updated 23 ಸೆಪ್ಟೆಂಬರ್ 2022, 16:15 IST
ಅಲೆವೂರು ಪ್ರಗತಿನಗರದ ಡಾ.ಶಿವರಾಮ ಕಾರಂತ ಕಲಾಗ್ರಾಮದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಪರ ಉತ್ಸವವನ್ನು ತುಳುಕೂಟದ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿ ಮಾತನಾಡಿದರು.
ಅಲೆವೂರು ಪ್ರಗತಿನಗರದ ಡಾ.ಶಿವರಾಮ ಕಾರಂತ ಕಲಾಗ್ರಾಮದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಪರ ಉತ್ಸವವನ್ನು ತುಳುಕೂಟದ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿ ಮಾತನಾಡಿದರು.   

ಉಡುಪಿ: ಕಲೆ, ಸಂಸ್ಕೃತಿ, ಸಂಭ್ರಮವನ್ನು ಬಿಂಬಿಸುವ ಜನಪದ ಕಲೆಗಳು ಜನರಿಗೆ ಮನರಂಜನೆಯ ಜತೆಗೆ ಭವ್ಯ ಸಂಸ್ಕೃತಿ, ಪರಂಪರೆಯನ್ನು ಕಾಪಾಡಿಕೊಂಡು ಬಂದಿವೆ ಎಂದು ತುಳುಕೂಟದ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು.

ಅಲೆವೂರು ಪ್ರಗತಿನಗರದ ಡಾ.ಶಿವರಾಮ ಕಾರಂತ ಕಲಾಗ್ರಾಮದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಪರ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದರ ಜತೆಗೆ ಜಾನಪದ ಕಲೆಗಳನ್ನು ಕಲಿಯುವ ಬಗ್ಗೆ ಆಸಕ್ತಿ ತೋರಬೇಕು. ಇದರಿಂದ ಕಲೆ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದು ಸಲಹೆ ನೀಡಿದರು.

ಜಾನಪದ ವಿದ್ವಾಂಸ ಗಣನಾಥ ಎಕ್ಕಾರು ಮಾತನಾಡಿ, ಸಂಸ್ಕೃತಿ, ಜಾನಪದ ಕಲೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಕರಾವಳಿಯ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನ ಹಾಗೂ ನಾಟಕಗಳನ್ನು ಮಕ್ಕಳಿಗೆ ಪರಿಚಯಿಸಬೇಕಾಗಿದೆ. ಕಲಿಕೆಯಲ್ಲಿ ಸಾಧನೆ ಮಾಡಲು ಜಾನಪದ ಕಲೆಗಳಲ್ಲಿ ಭಾಗವಹಿಸುವಿಕೆಯೂ ಮುಖ್ಯ ಕಾರಣ. ಕಲೆಗಳಲ್ಲಿ ಭಾಗವಹಿಸಿದರೆ ವ್ಯಕ್ತಿತ್ವ ಬೆಳವಣಿಗೆಯೂ ಸಾದ್ಯ ಎಂದರು.

ADVERTISEMENT

ಜನಪರ ಉತ್ಸವದಲ್ಲಿ ಸಾಂಸ್ಕೃತಿಕ ಹಾಗೂ ಜಾನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ಕಂಗೀಲು ನೃತ್ಯ, ಕಂಸಾಳೆ, ವೀರಗಾಸೆ, ಪೂಜಾ ಕುಣಿತ, ಸುಗ್ಗಿ ಕುಣಿತ, ಡೊಳ್ಳು, ಬೇಡರ ಕುಣಿತ, ಕರಗ, ಕೋಲಾಟ, ಭರತನಾಟ್ಯ, ಜಾನಪದ ನೃತ್ಯ, ನಂಧಿದ್ವಜ ಕುಣಿತ ಸೇರಿದಂತೆ ಹಲವು ಜಾನಪದ ಕಲಾತಂಡಗಳ ಪ್ರದರ್ಶನಗಳು ಕಣ್ಮನ ಸೆಳೆದವು.

ಉಡುಪಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಚ್‌.ಪಿ.ರವಿರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ರಾಜೀವ ನಗರ ಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ, ಶಿಕ್ಷಕ ಎಸ್‌.ಎಸ್‌.ಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.