ADVERTISEMENT

ಯಕ್ಷಗಾನ ಕಲಾರಂಗದ ಕಲಾ ಪೋಷಣೆ ಅಭಿನಂದನೀಯ: ಈಶಪ್ರಿಯ ತೀರ್ಥ ಸ್ವಾಮೀಜಿ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 16:38 IST
Last Updated 26 ಸೆಪ್ಟೆಂಬರ್ 2021, 16:38 IST
ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಕರ್ಗಲ್ಲು ವಿಶ್ವೇಶ ಭಟ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ, ವಾಸುದೇವ ರಾವ್ ಸುರತ್ಕಲ್ ಅವರಿಗೆ ಮಟ್ಟಿ ಮುರಳೀಧರ ರಾವ್ ಪ್ರಶಸ್ತಿ ಹಾಗೂ ವಿದ್ವಾನ್ ಉಮಾಕಾಂತ ಭಟ್ ಕೆರೇಕೈ ಅವರಿಗೆ ಪೆರ್ಲ ಪಂಡಿತ ಕೃಷ್ಣ ಭಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಕರ್ಗಲ್ಲು ವಿಶ್ವೇಶ ಭಟ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ, ವಾಸುದೇವ ರಾವ್ ಸುರತ್ಕಲ್ ಅವರಿಗೆ ಮಟ್ಟಿ ಮುರಳೀಧರ ರಾವ್ ಪ್ರಶಸ್ತಿ ಹಾಗೂ ವಿದ್ವಾನ್ ಉಮಾಕಾಂತ ಭಟ್ ಕೆರೇಕೈ ಅವರಿಗೆ ಪೆರ್ಲ ಪಂಡಿತ ಕೃಷ್ಣ ಭಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.   

ಉಡುಪಿ: ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಕರ್ಗಲ್ಲು ವಿಶ್ವೇಶ ಭಟ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ, ವಾಸುದೇವ ರಾವ್ ಸುರತ್ಕಲ್ ಅವರಿಗೆ ಮಟ್ಟಿ ಮುರಳೀಧರ ರಾವ್ ಪ್ರಶಸ್ತಿ ಹಾಗೂ ವಿದ್ವಾನ್ ಉಮಾಕಾಂತ ಭಟ್ ಕೆರೇಕೈ ಅವರಿಗೆ ಪೆರ್ಲ ಪಂಡಿತ ಕೃಷ್ಣ ಭಟ್ ಪ್ರಶಸ್ತಿ ನೀಡಿ ಗೌರವಿಸಿದರು.

ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಕಲಾಸಾಧಕರನ್ನು ಗುರುತಿಸಿ ಗೌರವಿಸಿದಾಗ ಇತರರಿಗೂ ಸಾಧನೆಗೆ ಪ್ರೇರಣೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಾರಂಗದ ಸೇವೆ ಅಭಿನಂದನೀಯ. ಕಲಾ ಪೋಷಣೆಯ ಜತೆಗೆ, ಕಲಾವಿದರ ನೆರವಿಗೆ ನಿಂತಿರುವ ಸಂಸ್ಥೆಯ ಕಾರ್ಯ ನಿರಂತರವಾಗಿರಲಿ ಎಂದು ಆಶಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಸ್‌.ಯಡಿಪಡಿತ್ತಾಯ ಮಾತನಾಡಿ, ನೂರಾರು ಅಸಂಘಟಿತ ಕಲಾವಿದರ ಬದುಕಿಗೆ ಭದ್ರತೆ ನೀಡುವಂತಹ ಕಾರ್ಯವನ್ನು ಯಕ್ಷಗಾನ ಕಲಾರಂಗ ಮಾಡುತ್ತಿದೆ. ಯಾವ ವಿಶ್ವವಿದ್ಯಾಲಯಗಳೂ ಮಾಡದ ಕಲಾಸೇವೆಯನ್ನು ಯಕ್ಷಗಾನ ಕಲಾರಂಗ ಮಾಡಿ ತೋರಿಸಿದೆ ಎಂದರು.

ADVERTISEMENT

ಯಕ್ಷಗಾನ ಕಲಾವಿದರಿಗೆ ಯಕ್ಷನಿಧಿಯ ಮೂಲಕ ನೆರವು, ಶಾಲಾ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ, ವಿದ್ಯಾಪೋಷಕ್ ಮೂಲಕ ಬಡ ವಿದ್ಯಾರ್ಥಿಗಳ ಕುಟುಂಬಗಳಿಗೆಆರ್ಥಿಕ ನೆರವು ನೀಡುತ್ತಿರುವ, ಮನೆಯನ್ನು ಕಟ್ಟಿಸಿಕೊಡುವ ಕಾರ್ಯ ಶ್ಲಾಘನೀಯ ಎಂದರು.

ಪ್ರಶಸ್ತಿ ಸ್ವೀಕರಿಸಿ ಕರ್ಗಲ್ಲು ವಿಶ್ವೇಶ ಭಟ್ ಮಾತನಾಡಿ, ಮಕ್ಕಳನ್ನು ಕಟ್ಟಿಕೊಂಡು ಯಕ್ಷಗಾನದ ಸೇವೆ ಮಾಡುತ್ತಿರುವುದು ತೃಪ್ತಿ ನೀಡಿದೆ. ಯಕ್ಷಗಾನ ರಂಗದ ಸಂಘಟನೆಯ ಸೇವೆಗೆ ಪ್ರತಿಯಾಗಿ ಗೌರವ ಸಿಕ್ಕಿರುವುದು, ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಷ್ಟು ಸಂತಸವಾಗಿದೆ ಎಂದರು.

‌‌ಉಮಾಕಾಂತ ಭಟ್ ಕೆರೇಕೈ ಮಾತನಾಡಿ, ಪೆರ್ಲ ಪಂಡಿತ ಕೃಷ್ಣ ಭಟ್ಟರು ಒಳ್ಳೆಯ ಅರ್ಥದಾರಿ ಮಾತ್ರವಲ್ಲ; ವಿದ್ವಾಂಸರು ಹಾಗೂ ಜ್ಞಾನ ಶಾಸ್ತ್ರ ಪಂಡಿತರು ಕೂಡ. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಹೆಮ್ಮೆ ಇದೆ ಎಂದರು.

ವಾಸುದೇವ ರಾವ್ ಸುರತ್ಕಲ್ ಮಾತನಾಡಿ ‘ಯಕ್ಷಗಾನ ಕ್ಷೇತ್ರವು ಸಾಧನೆಗೆ ಹುಲುಸಾದ ಕ್ಷೇತವಾಗಿದ್ದು, ಅಧ್ಯಯನ ಹಾಗೂ ಅಧ್ಯಾಪನದಿಂದ ಎತ್ತರಕ್ಕೆ ಬೆಳೆಯಬಹುದು. ಯಕ್ಷಗಾನದ ಹೊರಹೊಳವುಗಳನ್ನು ಅರಿಯಬಹುದು. ಯಕ್ಷಗಾನ ಕಲೆಯನ್ನು ದೇವರೆಂದು ತಿಳಿದು ಕಾರ್ಯಪ್ರವೃತ್ತರಾದರೆ ಪ್ರಶಸ್ತಿಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎಂದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್ ಮಾತನಾಡಿ, ‘ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನಿಂದ ಇದುವರೆಗೂ 20 ಮನೆಗಳನ್ನು ಹಸ್ತಾಂತರ ಮಾಡಲಾಗಿದ್ದು, ಸೆ.29ರಂದು 21ನೇ ಮನೆಯನ್ನು ಮಂದಾರ್ತಿ ಮೇಳದ ಹಾಸ್ಯಕಲಾವಿದರಿಗೆ ಹಸ್ತಾಂತರ ಮಾಡಲಾಗುವುದು. ಅ.1ರಂದು ಸರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರಶಸ್ತಿಯನ್ನು ರಾಜಾಂಗಣದಲ್ಲಿ ಪ್ರದಾನ ಮಾಡಲಾಗುವುದು. 2ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅರ್ಥದಾರಿ ಎಂ.ಕೆ.ರಮೇಶ್ ಆಚಾರ್‌ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಕೃಷ್ಣಪ್ರಸಾದ ಅಡ್ಯಂತಾಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.