ADVERTISEMENT

ರಾಜ್ಯ ಸರ್ಕಾರಕ್ಕೆ ರೈತರ ಕಾಳಜಿ ಇಲ್ಲ: ಬಿ.ವೈ.ವಿಜಯೇಂದ್ರ ಆರೋಪ

ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಪದಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 3:13 IST
Last Updated 20 ನವೆಂಬರ್ 2025, 3:13 IST
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು   

ಉಡುಪಿ: ‘ಅತಿವೃಷ್ಟಿಯಿಂದ ಬೆಳೆ ನಾಶವಾದ ರೈತರಿಗೆ ಇನ್ನೂ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ರೈತರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಿಂಚಿತ್‌ ಕಾಳಜಿ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಶಾರದಾ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಪದಾಧಿಕಾರಿಗಳ ಪದಪ್ರದಾನ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಕಬ್ಬು ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಉಸ್ತುವಾರಿ ಸಚಿವರಾಗಲಿ, ಸಕ್ಕರೆ ಖಾತೆಯ ಸಚಿವರಾಗಲಿ ಭೇಟಿ ನೀಡಿಲ್ಲ. ಅಧಿಕಾರದ ಮದ, ದರ್ಪದಿಂದ ಆಡಳಿತ ಪಕ್ಷವು ಈ ರೀತಿ ವರ್ತಿಸುತ್ತಿದೆ’ ಎಂದರು.

ADVERTISEMENT

‘ಬೆಲೆ ಏರಿಕೆಯು ರಾಜ್ಯ ಸರ್ಕಾರದ ಆರನೇ ಗ್ಯಾರೆಂಟಿಯಾಗಿದೆ. ಪ್ರತಿ ವರ್ಷ ₹58 ಸಾವಿರ ಕೋಟಿಯನ್ನು ಗ್ಯಾರೆಂಟಿಗಳಿಗಾಗಿ ವಿನಿಯೋಗಿಸಲಾಗುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣ ಸಾಕಾಗುತ್ತಿಲ್ಲ’ ಎಂದರು.

‘ಸರ್ಕಾರಕ್ಕೆ ಗ್ಯಾರೆಂಟಿಗಳ ಬಗ್ಗೆ ವಿಶ್ವಾಸವಿದ್ದಿದ್ದರೆ, ಇಷ್ಟು ಹೊತ್ತಿಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುತ್ತಿತ್ತು’ ಎಂದು ತಿಳಿಸಿದರು.

‘ರಸ್ತೆ ಗುಂಡಿ ಮುಚ್ಚುವ, ಹೊಸ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ. ಪ್ರಿಯಾಂಕ ಖರ್ಗೆಯವರು ಸರ್ವ ಇಲಾಖೆಗಳ ಸಚಿವ. ಅವರ ಇಲಾಖೆಯ ಬಗ್ಗೆ ಯಾವತ್ತೂ ಮಾತನಾಡುವುದಿಲ್ಲ. ರಾಷ್ಟ್ರ, ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡುತ್ತಾರೆ’ ಎಂದು ಹೇಳಿದರು.

‘2047ರ ವೇಳೆಗೆ ದೇಶವು ವಿಕಸಿತ ಭಾರತವಾಗಿ ಪರಿವರ್ತನೆಯಾಗಬೇಕು ಎಂಬುದು ಪ್ರಧಾನಿ ಮೋದಿ ಅವರ ಆಶಯವಾಗಿದೆ. ಅದರಲ್ಲಿ ಕರ್ನಾಟಕ ರಾಜ್ಯದ ಪಾತ್ರವೂ ಇರಬೇಕು. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ದುರಾಡಳಿತವಿರುವುದು ದುರಾದೃಷ್ಟಕರ’ ಎಂದು ಹೇಳಿದರು.

‘ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿಯಲ್ಲಿ ಅಧಿಕಾರಕ್ಕೆ ಬರುವ ವಾತಾವರಣ ರೂಪುಗೊಳ್ಳುತ್ತಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದು ನಮ್ಮ ಕರ್ತವ್ಯವಾಗಿದೆ’ ಎಂದು ಹೇಳಿದರು.

ಸಂಸದ ಬ್ರಿಜೇಶ್ ಚೌಟ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಕೆಲಸವನ್ನು ಜನರು ಒಪ್ಪಿ ಅವಕಾಶ ಕೊಟ್ಟಿರುವುದಕ್ಕೆ ಬಿಹಾರದ ಚುನಾವಣಾ ಫಲಿತಾಂಶವೇ ಸಾಕ್ಷಿ’ ಎಂದು ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಉದಯ್ ಕುಮಾರ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು.

ರಾಜ್ಯದಲ್ಲಿ ಬಡವರು ರೈತರಿಗೆ ನೆಮ್ಮದಿ ಇಲ್ಲ. ಜಾತಿ –ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ

‘ಫಲಿತಾಂಶದ ಬಳಿಕ ರಾಹುಲ್‌ ಕಾಣೆಯಾಗಿದ್ದಾರೆ’

ಉಡುಪಿ: ‘ಮತ ಕಳವು ಬಗ್ಗೆ ವ್ಯಾಪಕ ಪ್ರಚಾರ ಮಾಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ಕಾಣೆಯಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ .ವೈ .ವಿಜಯೇಂದ್ರ ಹೇಳಿದರು.

ಸುದ್ದಿಗಾರರ ಜೊತೆಗೆ ಬುಧವಾರ ಇಲ್ಲಿ ಮಾತನಾಡಿದ ಅವರು ‘ಇಂತಹ ಫಲಿತಾಂಶವನ್ನು ರಾಹುಲ್ ಗಾಂಧಿ ಅವರು ನಿರೀಕ್ಷೆ ಮಾಡಿರಲಿಕ್ಕಿಲ್ಲ. ಬಿಹಾರದ ಜನ ಕಾಂಗ್ರೆಸ್‌ ಕಪಾಳ ಮೋಕ್ಷ ಮಾಡಿದ್ದಾರೆ. ಇನ್ನಾದರೂ ಅವರು ಎಚ್ಚೆತ್ತುಕೊಂಡು ಜವಾಬ್ದಾರಿಯಿಂದ ಕೆಲಸ ಮಾಡಲಿ’ ಎಂದರು.

‘ಇದೇ 28ರಂದು ಪ್ರಧಾನಿ ಮೋದಿ ಅವರು ಉಡುಪಿಗೆ ಬರುವ ಬಗ್ಗೆ ಮಾಹಿತಿ ಬಂದಿದೆ. ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ಶಾಸಕರು ಮುಖಂಡರ ಜೊತೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

‘ಬಹಳ ವರ್ಷದ ಬಳಿಕ ಮೋದಿ ಅವರು ಉಡುಪಿಗೆ ಬರುತ್ತಿರುವುದರಿಂದ ಪಕ್ಷದ ಕಾರ್ಯಕರ್ತರಲ್ಲೂ ಜನ ಸಾಮಾನ್ಯರಲ್ಲೂ ಉತ್ಸಾಹ ಮೂಡಿದೆ’ ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಎರಡು ಮೂರು ತಿಂಗಳುಗಳಿಂದ ಡಿಕೆಶಿ ಅವರು ಮಾರ್ಮಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗೆ ದಿನೇ ದಿನೇ ಪೈಪೋಟಿ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

‘ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆ ಎನ್ನುವುದೇ ಜನರಿಗೆ ಮರೆತು ಹೋಗಿದೆ. ಬಡವ ರೈತ ಹಿಂದೂ ವಿರೋಧಿ ಸರ್ಕಾರ ರಾಜ್ಯದಲ್ಲಿದೆ. ಈ ಸರ್ಕಾರವನ್ನು ಕಿತ್ತು ಹಾಕಿದರೆ ಜನರಿಗೆ ಅನುಕೂಲ’ ಎಂದರು.

ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವರಿಗೆ ಯಾವುದೇ ವಿಚಾರದ ಬಗ್ಗೆ ಮಾಹಿತಿ ಇರೋದಿಲ್ಲ. ಅವರು ಅಸಹಾಯಕರಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.