ADVERTISEMENT

ತಾಯಿಯ ಮಡಿಲಲ್ಲಿ ಮಲಗಿದ್ದ ಮಗುವಿನ ಅಪಹರಣ 

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 9:43 IST
Last Updated 12 ಜುಲೈ 2019, 9:43 IST
 ಸಾನ್ವಿಕಾ
 ಸಾನ್ವಿಕಾ   

ಸಿದ್ದಾಪುರ: ಕುಂದಾಪುರ ತಾಲ್ಲೂಕಿನ ಕುಗ್ರಾಮವಾದ ಎಡಮೊಗೆ ಗ್ರಾಮದ ಕುಮ್ಟಿಬೇರು ಎಂಬಲ್ಲಿ ಗುರುವಾರ ಬೆಳಿಗ್ಗೆ ತಾಯಿಯ ಮಡಿಲಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿರುವ ಘಟನೆ ನಡೆದಿದೆ. ಈ ಘಟನೆ ಕರಾವಳಿಯನ್ನು ಬೆಚ್ಚಿಬೀಳಿಸಿದೆ.

ಎಡಮೊಗೆ ನಿವಾಸಿ ಸಂತೋಷ ನಾಯ್ಕ ಹಾಗೂ ರೇಖಾ ದಂಪತಿಯ ಇಬ್ಬರು ಮಕ್ಕಳಲ್ಲಿ ಹಿರಿಯ ಗಂಡು ಮಗುವಿಗೆ ಎರಡೂವರೆ ವರ್ಷವಾಗಿದ್ದು, ಹೆಣ್ಣು ಮಗು ಸಾನ್ವಿಕಾಗೆ 1 ವರ್ಷ 3 ತಿಂಗಳಾಗಿದೆ. ಗುರುವಾರ ಬೆಳಗಿನ ಜಾವ ಮನೆಯೊಳಗೆ ತಾಯಿಯೊಂದಿಗೆ ಮಲಗಿದ್ದ ಇಬ್ಬರು ಮಕ್ಕಳಲ್ಲಿ, ಹೆಣ್ಣು ಮಗುವನ್ನು ಮುಸುಕುಧಾರಿ ವ್ಯಕ್ತಿ ಅಪಹರಿಸಿದ್ದಾನೆ.

ಸಂಡೂರು ಪವರ್ ಪ್ರಾಜೆಕ್ಟ್‌ನಲ್ಲಿ ರಾತ್ರಿ ಪಾಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುವ ಸಂತೋಷ್ ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದರು. ಸಂತೋಷ್‌ ಅವರ ತಾಯಿ ಮನೆಯಲ್ಲಿರುತ್ತಿದ್ದರು. ಆದರೆ, ಬುಧವಾರದಂದು ಆಕೆ ಮಗಳ ಮನೆಗೆ ತೆರಳಿದ್ದರು. ರೇಖಾ ತಮ್ಮ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದರು. ಮನೆಯ ಹಿಂದಿನ ಬಾಗಿಲಿಂದ ಒಳ ಪ್ರವೇಶಿಸಿದ ಮುಸುಕುಧಾರಿ ಹೆಣ್ಣು ಮಗುವನ್ನು ಅಪಹರಿಸಿದ್ದಾನೆ.

ADVERTISEMENT

ಮಗುವಿನ ಅಳು ಹಾಗೂ ಬಾಗಿಲ ಶಬ್ದ ಕೇಳಿಸಿಕೊಂಡ ರೇಖಾ ಆಗಂತುಕನ ಬೆನ್ನಟ್ಟಿದಾಗ, ಆತ ಇವರ ಮನೆಯ ಸಮೀಪವಿದ್ದ ಕುಬ್ಜಾ ನದಿಗೆ ಹಾರಿದ್ದಾನೆ. ರೇಖಾ ಕೂಡ ಗಂಡು ಮಗುವನ್ನು ಹಿಡಿದು ಮಗುವನ್ನು ರಕ್ಷಿಸಲು ನದಿ ಹಾರಿದಾಗ ಮಳೆಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿದ್ದು, ಅವರ ಕೂಗು ಕೇಳಿ ಅಕ್ಕಪಕ್ಕದವರು ಆಗಮಿಸಿ ಇವರನ್ನು ರಕ್ಷಿಸಿದ್ದರು.

‘ನಮ್ಮ ವಿಷಯ ತಿಳಿದವರೇ ಯಾರೋ ಈ ಕೃತ್ಯ ಎಸಗಿದ್ದಾರೆ’ ಎಂದು ದಂಪತಿ ಆರೋಪಿಸಿದ್ದಾರೆ.

ಮಗುವಿನ ನಿಗೂಢ ನಾಪತ್ತೆ ಪ್ರಕರಣ ಸಮಗ್ರ ತನಿಖೆಯಿಂದಷ್ಟೇ ಬಯಲಾಗಬೇಕಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ತನಿಖೆಗೆ ಆದೇಶಿಸಿದ್ದಾರೆ. ಡಿವೈಎಸ್‌ಪಿ ದಿನೇಶ್‌ಕುಮಾರ್ ಅವರಿಗೆ ತನಿಖೆಯ ಹೊಣೆ ವಹಿಸಲಾಗಿದೆ. ಶ್ವಾನದಳ, ಅಗ್ನಿಶಾಮಕದಳ ಬಂದಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.