ADVERTISEMENT

ಕೊರಗರ ವೈದ್ಯಕೀಯ ವೆಚ್ಚ ಮರುಪಾವತಿಗೆ ಒಪ್ಪಿಗೆ

ಜನಪ್ರತಿನಿಧಿಗಳ ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ: ಶಾಸಕ ರಘುಪತಿ ಭಟ್‌

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 15:48 IST
Last Updated 14 ಸೆಪ್ಟೆಂಬರ್ 2022, 15:48 IST
ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಸಕರನ್ನೊಳಗೊಂಡ ನಿಯೋಗ ಮಂಗಳವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಹಿಂದಿನಂತೆಯೇ ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ಕೊರಗರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಮರುಪಾವತಿ ಮಾಡಬೇಕು ಎಂದು ಮನವಿ ಸಲ್ಲಿಸಿತು.
ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಸಕರನ್ನೊಳಗೊಂಡ ನಿಯೋಗ ಮಂಗಳವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಹಿಂದಿನಂತೆಯೇ ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ಕೊರಗರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಮರುಪಾವತಿ ಮಾಡಬೇಕು ಎಂದು ಮನವಿ ಸಲ್ಲಿಸಿತು.   

ಉಡುಪಿ: ಪರಿಶಿಷ್ಟ ಪಂಗಡದ ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ಕೊರಗ ಜನಾಂಗದವರ ವೈದ್ಯಕೀಯ ವೆಚ್ಚ ಮರು ಪಾವತಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಸಕರನ್ನೊಳಗೊಂಡ ನಿಯೋಗ ಮಂಗಳವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಹಿಂದಿನಂತೆಯೇ ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ಕೊರಗರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಮರುಪಾವತಿ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ಸೌಲಭ್ಯ ಮುಂದುವರಿಸುವಂತೆ ಸೂಚನೆ ನೀಡಿದರು ಎಂದು ರಘುಪತಿ ಭಟ್‌ ತಿಳಿಸಿದರು.

ಆರ್ಥಿಕವಾಗಿ ತೀರಾ ಹಿಂದುಳಿದಿರುವ ಪರಿಶಿಷ್ಟ ಪಂಗಡ, ಆದಿವಾಸಿ ಬುಡಕಟ್ಟು ಸಮುದಾಯ ಹಾಗೂ ಕೊರಗ ಜನಾಂಗದವರು ಗಂಭೀರ ಖಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ರೋಗಿಗಳ ವೈದ್ಯಕೀಯ ವೆಚ್ಚವನ್ನು ಹಿಂದೆ ಸರ್ಕಾರವೇ ಭರಿಸುತ್ತಿತ್ತು.

ADVERTISEMENT

ಈಚೆಗೆ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯ ಮುಂದುವರಿಸುವುದಿಲ್ಲ ಎಂಬ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಪರಿಣಾಮ ನಗರ ಪ್ರದೇಶದಿಂದ ದೂರವಿದ್ದು ಕಾಡಂಚಿನಲ್ಲಿ ವಾಸವಿರುವ ಬಡಕಟ್ಟು ಹಾಗೂ ಕೊರಗ ಸಮುದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು.

ರಕ್ತ ಹೀನತೆ, ಅಪೌಷ್ಟಿಕತೆ, ಟಿಬಿ, ಕ್ಯಾನ್ಸರ್, ಮಧುಮೇಹದಂತಹ ತೀವ್ರ ತರಹದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಮಸ್ಯೆ ಎದುರಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರದ ಯಾವುದೇ ವಿಮಾ ಯೋಜನೆಗಳು ಉಪಯುಕ್ತವಾಗದಿರುವುದರಿಂದ ವೈದ್ಯಕೀಯ ವೆಚ್ಚ ಮರುಪಾವತಿ ಅವಶ್ಯಕ ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲಾಗಿತ್ತು.

ಜತೆಗೆ, ಬುಡಕಟ್ಟು ಸಮುದಾಯಗಳು ವಾಸವಾಗಿರುವ ಕಾಲೋನಿಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿತ್ತು. ಅಂತಿಮವಾಗಿ ಬೇಡಿಕೆಗಳಿಗೆ ಸರ್ಕಾರದಿಂದ ಸ್ಪಂದನ ದೊರೆತಿದೆ ಎಂದು ಶಾಸಕ ರಘುಪತಿ ಭಟ್‌ ಹೇಳಿದ್ದಾರೆ.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬೈಂದೂರು ಶಾಸಕ ಎಂ.ಸುಕುಮಾರ್ ಶೆಟ್ಟಿ, ಮಂಗಳೂರು ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಭಟ್ಕಳ ಶಾಸಕ ಸುನಿಲ್ ನಾಯ್ಕ್, ಕುಮಟಾ ಶಾಸಕ ದಿನಕರ ಶೆಟ್ಟಿ, ಕಾರವಾರ ಶಾಸಕಿ ರೂಪಾಲಿ ನಾಯ್ಕ್ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.