ADVERTISEMENT

ಉಡುಪಿ ಕೃಷ್ಣಮಠದಲ್ಲಿ ದೇವರ ದರ್ಶನ ಪಡೆದ 1,160 ಭಕ್ತರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 14:53 IST
Last Updated 11 ಜುಲೈ 2021, 14:53 IST
ಉಡುಪಿಯ ಕೃಷ್ಣಮಠಕ್ಕೆ ಭಾನುವಾರ ಭೇಟಿನೀಡಿದ್ದ ಭಕ್ತರ ದಂಡು.
ಉಡುಪಿಯ ಕೃಷ್ಣಮಠಕ್ಕೆ ಭಾನುವಾರ ಭೇಟಿನೀಡಿದ್ದ ಭಕ್ತರ ದಂಡು.   

ಉಡುಪಿ: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಬಾಗಿಲು ಮುಚ್ಚಿದ್ದ ಕೃಷ್ಣಮಠ ಭಾನುವಾರ ಭಕ್ತರ ಪ್ರವೇಶಕ್ಕೆ ಮುಕ್ತವಾಯಿತು. ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿನೀಡಿ ಕೃಷ್ಣನ ದರ್ಶನ ಪಡೆದರು.

1,160 ಭಕ್ತರ ಭೇಟಿ

ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ದರ್ಶನಕ್ಕೆ ಅನುಮತಿ ನೀಡಲಾಗಿತ್ತು. ಈ ಅವಧಿಯಲ್ಲಿ 1,160 ಭಕ್ತರು ದೇವರ ದರ್ಶನ ಪಡೆದರು. ಸ್ಥಳೀಯರಿಗಿಂತ ಹೊರ ಜಿಲ್ಲೆಗಳಿಂದ ಬಂದಿದ್ದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ಮಾಹಿತಿ ನೀಡಿದರು.

ADVERTISEMENT

ದೇವರ ದರ್ಶನಕ್ಕೆ ಬೆಳಿಗ್ಗೆಯೇ ಹೆಚ್ಚಿನ ಭಕ್ತರು ಕೃಷ್ಣಮಠಕ್ಕೆ ಬಂದಿದ್ದರು. ಆದರೆ, ಬೆಳಿಗ್ಗೆ ದರ್ಶನಕ್ಕೆ ಅವಕಾಶ ಇರದಿದ್ದರಿಂದ ಕನಕನ ಕಿಂಡಿಯಲ್ಲಿ ದರ್ಶನ ಪಡೆದರು. ನಿರಂತರ ಮಳೆ ಸುರಿಯುತ್ತಿದ್ದರೂ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು. ಹೆಚ್ಚಿನ ಭಕ್ತರು ಮಾಸ್ಕ್ ಧರಿಸಿ ಬಂದಿದ್ದರೂ ವ್ಯಕ್ತಿಗತ ಅಂತರ ಕಾಣಿಸಲಿಲ್ಲ.

ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯ ಬಳಿಕ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದರೂ ಕೃಷ್ಣಮಠ ಭಕ್ತರ ಪ್ರವೇಶಕ್ಕೆ ಮುಕ್ತವಾಗಿರಲಿಲ್ಲ. ಪರಿಸ್ಥಿತಿ ನೋಡಿಕೊಂಡು ದೇವಸ್ಥಾನ ತೆರೆಯುವುದಾಗಿ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದರು. ಜಿಲ್ಲೆಯಲ್ಲಿ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.