ADVERTISEMENT

‘ಮಕ್ಕಳಲ್ಲಿ ಕುಂದಗನ್ನಡ ಆಸಕ್ತಿ ಬೆಳೆಸಿ’

ಕಾರ್ಕಳದಲ್ಲಿ ಕುಂದಾಪ್ರ ಕನ್ನಡ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:36 IST
Last Updated 26 ಜುಲೈ 2025, 6:36 IST
ಕಾರ್ಕಳ ತಾಲ್ಲೂಕು ಕನ್ನಡ‌ ಸಾಹಿತ್ಯ ಪರಿಷತ್ ವತಿಯಿಂದ ಹೋಟೆಲ್ ಪ್ರಕಾಶ ಸಂಭ್ರಮ ಸಭಾಂಗಣದಲ್ಲಿ ಗುರುವಾರ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಕಳ ತಾಲ್ಲೂಕು ಕನ್ನಡ‌ ಸಾಹಿತ್ಯ ಪರಿಷತ್ ವತಿಯಿಂದ ಹೋಟೆಲ್ ಪ್ರಕಾಶ ಸಂಭ್ರಮ ಸಭಾಂಗಣದಲ್ಲಿ ಗುರುವಾರ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಲಾಯಿತು.   

ಕಾರ್ಕಳ: ಕುಂದಾಪ್ರ ಕನ್ನಡವು  ಕನ್ನಡ ಭಾಷೆಯ ಅವಿಭಾಜ್ಯ ಅಂಗವಾಗಿದ್ದು, ತಮ್ಮ ಮಕ್ಕಳು ಎಲ್ಲೇ ಇರಲಿ, ಕನಿಷ್ಠ ಮನೆಯಲ್ಲಾದರೂ ಇದನ್ನೇ ಮಾತಾಡುವಂತೆ ಕುಂದಗನ್ನಡದ ಹೆತ್ತವರು ಆಸಕ್ತಿ ಹೊಂದಬೇಕು. ಆಗ ಮಾತ್ರ ಸತ್ವಯುತ ಶಕ್ತಿಶಾಲಿ ಭಾಷೆ ಉಳಿದು ಬೆಳೆಯಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕಾಧ್ಯಕ್ಷ ಸಾಹಿತಿ ಐರೋಡಿ ಶಂಕರನಾರಾಯಣ ಹೆಬ್ಬಾರ್ ತಿಳಿಸಿದರು.

ಇಲ್ಲಿನ ಅನಂತಶಯನದ ಹೋಟೆಲ್ ಪ್ರಕಾಶ ಸಂಭ್ರಮ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಕನ್ನಡ‌ ಸಾಹಿತ್ಯ ಪರಿಷತ್ ಆಯೋಜಿಸಿದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಅವರು ಮಾತನಾಡಿ , ಇತರ ಪ್ರಾದೇಶಿಕ ಆಡು ಕನ್ನಡದಂತೆ ಕುಂದಾಪ್ರ ಕನ್ನಡ ಇದೆ. ಆದರೆ ಇದರ ಜೋರು, ರಾಪು, ಜಾಪು, ತನಿ, ಒಯ್ಲು, ಹೊಯ್ಲು ಮತ್ತು ರಭಸ ಅತ್ಯಂತ ವಿಶಿಷ್ಟವಾದವು ಎಂದರು.

ಮಾತಾಡದೇ ಅದೆಷ್ಟೋ ಭಾಷೆಗಳು ಕಳೆದು ಹೋಗಿವೆ. ಕುಂದಾಪ್ರ ಕನ್ನಡ ಹಾಗಾಗಬಾರದು. ಎಲ್ಲ ಪ್ರಾದೇಶಿಕ ಆಡುಗನ್ನಡಗಳೂ ಶ್ರೇಷ್ಠವೇ. ಕುಂದಾಪ್ರ ಕನ್ನಡವೇ ಶ್ರೇಷ್ಠ ಎಂಬ ಅಂಧಾಭಿಮಾನ ನಮ್ಮದಲ್ಲ. ಈ ಭಾಷೆಯೊಂದಿಗೆ ಬದುಕು ಹೇಗೆ ಹಾಸುಹೊಕ್ಕಾಗಿದೆಯೆಂದು ಸ್ವಾರಸ್ಯಕರವಾಗಿ ಬಣ್ಣಿಸಿ ಭಾಷೆ ಬೇರೆ ಅಲ್ಲ, ಬದುಕು ಬೇರೆ ಅಲ್ಲ ಎಂದು ವಿವರಿಸಿದರು.

ADVERTISEMENT

ಉದ್ಯಮಿ ರಾಮಕೃಷ್ಣ ಆಚಾರ್ ಅವರು ಮಾತನಾಡಿ, ಅಡುಭಾಷೆ ನಮ್ಮ ನೈಜ ಭಾವನೆಗಳನ್ನು ಪೋಷಿಸಿ ಬದುಕನ್ನು ಸಮೃದ್ಧಗೊಳಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ‌ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ  ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಾರ್ಕಳದ ಜನ ಉತ್ತಮ ಸಹಕಾರ ಮತ್ತು ಸ್ಪಂದನೆ ನೀಡುತ್ತಿದ್ದಾರೆ ಎಂದರೂ.

ಎಸ್. ನಿತ್ಯಾನಂದ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕನ್ನಡ‌ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗುಣಪಾಲ ಕಡಂಬ, ಕಾರ್ಕಳ ರೋಟರಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಶುಭ ಕೋರಿದರು.

ಹೆಬ್ಬಾರರ ಕುಂದಗನ್ನಡ ಸೇವೆಗಾಗಿ ಸನ್ಮಾನಿಸಲಾಯಿತು. ಅಷಾಡಿ ತಿಂಗಳ ವಿಶೇಷ ಖಾದ್ಯಗಳಾದ ಮರಗೆಸದ ಪತ್ರೊಡೆ, ಅತ್ತಾಸು, ಹಲಸಿನ ಹಣ್ಣಿನ ಕಡಬು ಇತ್ಯಾದಿ ತಿನಿಸುಗಳಿದ್ದವು. ಧಾರಣಿ ಉಪಾಧ್ಯ ಕುಂದಗನ್ನಡದಲ್ಲಿ ಪ್ರಾರ್ಥಿಸಿದರು.

ಗೀತಾ ನಿರೂಪಿಸಿದರು. ಪ್ರಕಾಶ್ ನಾಯ್ಕ ವಂದಿಸಿದರು. ನರಸಿಂಹ ಮೂರ್ತಿ, ಶಿವ ಸುಬ್ರಹ್ಮಣ್ಯ ಭಟ್ , ಗಣೇಶ್ ಜಾಲ್ಸೂರು ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.