ಕುಂದಾಪುರ: ಸಮಾಜದ ಕಣ್ಣು ಕಿವಿಗಳಂತಿರುವ ಮಾಧ್ಯಮ ಒಳ್ಳೆಯ– ಕೆಟ್ಟ ವಿಚಾರಗಳನ್ನು ನಿಷ್ಠುರವಾಗಿ ಹೇಳುವ ಮನಃಸ್ಥಿತಿ ಹೊಂದಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.
ಇಲ್ಲಿನ ಭಂಡಾರ್‌ಕಾರ್ಸ್ ಕಾಲೇಜಿನ ಕೋಯಾಕುಟ್ಟಿ ಹಾಲ್‌ನಲ್ಲಿ ಬುಧವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ, ಡೈರೆಕ್ಟರಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮಗಳಲ್ಲಿ ಬರುವ ವರದಿ ಅಥವಾ ಚಿತ್ರಗಳು ಅವ್ಯವಸ್ಥೆಯನ್ನೇ ಸರಿಪಡಿಸುವಷ್ಟು ಬಲಶಾಲಿಯಾಗಿರುತ್ತದೆ. ನೊಂದವರಿಗೆ ನ್ಯಾಯ ಕೊಡಿಸುವ ಸೇತುವಿನಂತೆ ಮಾಧ್ಯಮದವರು ಕೆಲಸ ಮಾಡಬೇಕು. ವಡ್ಡರ್ಸೆ ರಘುರಾಮ ಶೆಟ್ಟಿ ಅವರಂತಹ ಧೀಮಂತ ಪತ್ರಕರ್ತರ ಪುತ್ರ ಐಪಿಎಸ್ ಮಧುಕರ ಶೆಟ್ಟಿ ಅವರು ತಮ್ಮ ಆದರ್ಶಗಳಿಂದ ಅಧಿಕಾರಿಗಳಿಗೆ ಇಂದಿಗೂ ಪ್ರಾತಃ ಸ್ಮರಣೀಯರಾಗಿದ್ದಾರೆ. ಕುಂದಾಪುರದ ಜನರು ಸಹೃದಯಿಗಳು ಎನ್ನುವುದು ನನ್ನ ಅನುಭವಕ್ಕೆ ಬಂದಿದೆ ಎಂದು ಹೇಳಿದರು.
ಪತ್ರಕರ್ತರ ಡೈರೆಕ್ಟರಿ ಬಿಡುಗಡೆ ಮಾಡಿದ ಕೋಟ ಮಣೂರು ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ. ಕುಂದರ್, ಸಮಾಜದ ಕೈಗನ್ನಡಿಯಂತಿರುವ ಮಾಧ್ಯಮದವರು ಸರಿ– ತಪ್ಪುಗಳನ್ನು ವಿಶ್ಲೇಷಣೆ ಮಾಡಿ ಹೇಳುವ ಗುಣಸ್ವಭಾವ ಹೊಂದಿರಬೇಕು. ವಸ್ತುನಿಷ್ಠವಲ್ಲದ ಪತ್ರಿಕೋದ್ಯಮ ಜನರಿಂದ ವಿಮರ್ಶೆಗೆ ಒಳಪಡುತ್ತದೆ ಎಂದರು.
ಉಪನ್ಯಾಸ ನೀಡಿದ ಮಣೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರಾಜೇಂದ್ರ ನಾಯಕ್, ಜಾತಿ– ಮತಗಳ ಅಂತರದ ಗೋಡೆಗಳನ್ನು ಮೀರಿ ನಿಲ್ಲುವ ಪತ್ರಕರ್ತರಿಗೆ ವೃತ್ತಿಧರ್ಮವೇ ಶ್ರೀರಕ್ಷೆ ಎಂದರು.
ಪತ್ರಕರ್ತ ಯು.ಎಸ್.ಶೆಣೈ, ಡಾ.ಉದಯ ಕುಮಾರ್ ತಲ್ಲೂರು ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಭಂಡಾರ್‌ಕಾರ್ಸ್ ಪದವಿ ಕಾಲೇಜು ಪ್ರಾಂಶುಪಾಲ ಶುಭಕರ ಆಚಾರಿ, ಪಿಯು ಕಾಲೇಜು ಪ್ರಾಂಶುಪಾಲ ಜಿ.ಎಂ.ಗೊಂಡ, ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕಾರ್ಯದರ್ಶಿ ನಜೀರ್ ಪೊಲ್ಯ, ಉಪಾಧ್ಯಕ್ಷ ವಿನಯ್ ಪಾಯಸ್, ಕಟ್ಟಡ ಸಮಿತಿ ಅಧ್ಯಕ್ಷ ರಾಜೇಶ್ ಕೆ.ಸಿ, ತಾಲ್ಲೂಕು ಸಂಘದ ಖಜಾಂಚಿ ಲೋಕೇಶ್ ಆಚಾರ್ಯ ತೆಕ್ಕಟ್ಟೆ ಭಾಗವಹಿಸಿದ್ದರು. ಕಾರ್ಯದರ್ಶಿ ಗಣೇಶ್ ಬೀಜಾಡಿ ಸ್ವಾಗತಿಸಿದರು. ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಉಪಾಧ್ಯಕ್ಷ ಬಿ. ರಾಘವೇಂದ್ರ ಪೈ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.