ADVERTISEMENT

ಕುಂದಾಪುರದಲ್ಲಿ ವರುಣನ ಅಬ್ಬರ: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:34 IST
Last Updated 5 ಜುಲೈ 2022, 4:34 IST
ಕುಂದಾಪುರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆನಗಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸಾಧು ಮೊಗೇರ್ತಿ ಎಂಬುವರ ವಾಸ್ತವ್ಯ ಮನೆಗೆ ಹಾನಿಯಾಗಿದೆ.
ಕುಂದಾಪುರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆನಗಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸಾಧು ಮೊಗೇರ್ತಿ ಎಂಬುವರ ವಾಸ್ತವ್ಯ ಮನೆಗೆ ಹಾನಿಯಾಗಿದೆ.   

ಕುಂದಾಪುರ: 3-4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿದೆ.

ಭಾನುವಾರ ರಾತ್ರಿಯೆಲ್ಲ ಎಡಬಿಡದೆ ಸುರಿದ ವರ್ಷಧಾರೆ ಸೋಮವಾರ ಬೆಳಿಗ್ಗೆಯೂ ತನ್ನ ಇರುವಿಕೆಯನ್ನು ಮುಂದುವರಿಸಿತ್ತು. ಮುಂಜಾನೆಯಿಂದಲೇ ಆರಂಭವಾಗಿದ್ದ ಸಣ್ಣ ಪ್ರಮಾಣದ ಮಳೆ ರಾತ್ರಿಯವರೆಗೂ ಮುಂದುವರಿದಿದೆ. 3 ದಿನಗಳಿಂದ ಕೆಲವು ಗಂಟೆಗಳ ಕಾಲ ಮಾತ್ರ ವಿಶ್ರಾಂತಿಯನ್ನು ತೆಗೆದುಕೊಂಡಿದ್ದ ಮಳೆರಾಯನ ಆರ್ಭಟಕ್ಕೆ ಉಭಯ ತಾಲ್ಲೂಕಿನ ಕೃಷಿ ಗದ್ದೆ ಹಾಗೂ ಕೃಷಿ ತೋಟಗಳು ಜಲಾವೃತವಾಗಿದೆ.

ಕೊಂಕಣ ರೈಲ್ವೆಯ ಹಳಿಯ ಇಕ್ಕೆಲಗಳಲ್ಲಿ ತುಂಬಿರುವ ನೀರು ಹರಿಯಲು ಸುಗಮ ವ್ಯವಸ್ಥೆ ಇಲ್ಲದ ಕಾರಣ ಅಲಲ್ಲಿ ಕೃತಕ ನೆರೆಯ ವಾತಾವರಣ ನಿರ್ಮಾಣವಾಗಿದೆ.

ADVERTISEMENT

ಆನಗಳ್ಳಿ, ನಾಡಾ ಗ್ರಾಮದ ಹಡವು, ಚಿಕ್ಕಳ್ಳಿ, ನಾವುಂದ ಗ್ರಾಮದ ಸಾಲ್ಬುಡ, ಸೇನಾಪುರ ಗ್ರಾಮದ ಸೇನಾಪುರದ ಬಯಲು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿರುವುದರಿಂದ ಕೃಷಿ ಗದ್ದೆಗಳಲ್ಲಿ ಬಿತ್ತಿರುವ ಭತ್ತದ ಬೀಜಗಳು ಕೊಳೆಯಬಹುದು ಎನ್ನುವ ಆತಂಕ ಕೃಷಿಕರನ್ನು ಕಾಡುತ್ತಿದೆ.

ಕೃಷಿ ಗದ್ದೆಗಳಲ್ಲಿ ತುಂಬಿರುವ ನೀರು ಮೇಲಕ್ಕೆ ಏರುತ್ತಿದ್ದು, ವರುಣನ ಆರ್ಭಟ ಇದೇ ರೀತಿ ಮುಂದುವರಿದಲ್ಲಿ ಮನೆಯ ಅಂಗಳ ಹಾಗೂ ಕೃಷಿ ತೋಟಗಳಲ್ಲಿ ನೀರು ತುಂಬುವ ಆತಂಕ ಎದುರಾಗಿದೆ.

ಆನಗಳ್ಳಿ ಗ್ರಾಮದ ಸಾಧು ಮೊಗೇರ್ತಿ, ಬಳ್ಕೂರು ಗ್ರಾಮದ ದಿವ್ಯಾ ಹಾಗೂ ಹೊಸಾಡು ಗ್ರಾಮದ ಸುಶೀಲಾ ಎಂಬುವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿ ಸಂಭವಿಸಿ ಒಟ್ಟು ₹ 90 ಸಾವಿರ ನಷ್ಟ ಉಂಟಾಗಿರುವ ಬಗ್ಗೆ ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.