ಕುಂದಾಪುರ: ‘ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳನ್ನು ಒಗ್ಗೂಡಿಸುವುದರಿಂದ ಸುದೃಢ ಸಮಾಜ ಕಟ್ಟಲು ಸಾಧ್ಯ’ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಭಾನುವಾರ ರಾಮಕ್ಷತ್ರಿಯ ಯುವಕ ಮಂಡಲದ 60ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ರಾಮಕ್ಷತ್ರಿಯ ಸಮಾಜ ಬಾಂಧವರಿಗಾಗಿ ನಡೆದ ಅಂತರ್ ರಾಜ್ಯಮಟ್ಟದ ರಾಮಕ್ಷತ್ರಿಯ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಕ್ಷತ್ರಿಯ ಸಮಾಜ ಆರ್ಥಿಕವಾಗಿ ಬಡತನದಲ್ಲಿದ್ದು, ಸಮಾಜದ ಏಳಿಗೆ ಹಾಗೂ ಒಗ್ಗಟ್ಟು ಬೆಸೆಯುವ ಕೆಲಸವಾಗಬೇಕು. ಈ ರೀತಿಯ ಕ್ರೀಡಾಕೂಟಗಳು ಎಲ್ಲೆಡೆ ಆಗುವುದರಿಂದ ಸಮಾಜದ ಯುವಜನರು ಒಗ್ಗೂಡಲು ಅವಕಾಶ ದೊರಕುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷ ರಾಜೇಶ್ ಪಡುಕೇರಿ, ಮುಂದಿನ ದಿನಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟದಂತಹ ಗ್ರಾಮೀಣ ಕ್ರೀಡಾಕೂಟವನ್ನು ನಡೆಸಲಾಗುವುದು ಎಂದರು.
ಕ್ರೀಡಾಕೂಟದಲ್ಲಿ ವಾಲಿಬಾಲ್, ಥ್ರೋಬಾಲ್, ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ಪಂದ್ಯಗಳಿಗೆ ಒಟ್ಟು 100 ತಂಡಗಳ 1,300 ಕ್ರೀಡಾಳುಗಳು ಭಾಗವಹಿಸಿದ್ದರು. ರಾಜ್ಯದ 6 ಜಿಲ್ಲೆಗಳಿಂದ, ಮುಂಬೈ ಹಾಗೂ ಕಾಸರಗೋಡಿನ ತಂಡಗಳಿದ್ದವು.
ಕುಂದಾಪುರ ರಾಮಕ್ಷತ್ರಿಯರ ಸಂಘದ ಅಧ್ಯಕ್ಷ ಲಕ್ಷ್ಮೀಶ್ ಹವಾಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್.ಆರ್.ಶಶಿಧರ ನಾಯ್ಕ್, ಬೆಂಗಳೂರು ಕದಂಬ ಗ್ರೂಪ್ ಆಫ್ ಹೊಟೇಟೆಲ್ಸ್‌ನ ಆಡಳಿತ ನಿರ್ದೇಶಕ ರಾಘವೇಂದ್ರ ಎಂ.ವಿ. ತೀರ್ಥಹಳ್ಳಿಯ ನಿವೃತ್ತ ಎಸಿಎಫ್‌ಒ ಮಂಜುನಾಥ ಎನ್., ಸೂರಜ್ ಮಂಗಳೂರು, ರಾಮಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷೆ ಸರೋಜ ಅರುಣ್‌ಕುಮಾರ್, ರಾಮಕ್ಷತ್ರಿಯ ಯುವಕ ಮಂಡಳಿ ಕುಂದಾಪುರದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಯು.ಕೆ, ಕಾರ್ಯದರ್ಶಿ ಗಣೇಶ್ ನಾಯಕ್, ಕೋಶಾಧಿಕಾರಿ ಸುರೇಶ್ ಕೆಳಮನೆ, ಗೌರವಾಧ್ಯಕ್ಷ ಪ್ರಭಾಕರ ರಾವ್ ನೇರಂಬಳ್ಳಿ, ನಿಯೋಜಿತ ಅಧ್ಯಕ್ಷ ನಾಗರಾಜ ದಫೇದಾರ್, ಕ್ರೀಡಾ ಕಾರ್ಯದರ್ಶಿಗಳಾದ ರಾಮು ಹೆಗ್ಡೆ, ರವಿ ಹೆಗ್ಡೆ, ಅಮರ್ ಕುಮಾರ್, ಗಣೇಶ ಬೀರಿ ಇದ್ದರು.
ಶ್ರೀರಾಮ ಮಂದಿರದಿಂದ ಗಾಂಧಿ ಮೈದಾನವರೆಗೆ ವಾಹನ ಜಾಥಾ ಮೂಲಕ ಕ್ರೀಡಾಜ್ಯೋತಿ ತರಲಾಯಿತು. ಸಮಾಜದ ಕ್ರೀಡಾ ಸಾಧಕರಾದ ನಾಗಶ್ರೀ ಉಪ್ಪಿನಕುದ್ರು, ಪೂರ್ವಿ ನಾಯಕ್, ಶಶಾಂಕ ಕೆ.ಸಿ., ಸುಪ್ರೀತಾ ಕ್ರೀಡಾಜ್ಯೋತಿಯನ್ನು ತಂದರು. ಮಧುಕರ ಕೆ. ನಿರ್ವಹಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.