ADVERTISEMENT

ಆಮೆ ಹಬ್ಬ: ಕಡಲ ಜೀವಿಗಳ ಸಂರಕ್ಷಣೆ ಅಗತ್ಯ- ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

​ಪ್ರಜಾವಾಣಿ ವಾರ್ತೆ
Published 1 ಮೇ 2022, 6:23 IST
Last Updated 1 ಮೇ 2022, 6:23 IST
ಕುಂದಾಪುರ ಸಮೀಪದ ಕೋಡಿಯ ಕಡಲ ಕಿನಾರೆಯಲ್ಲಿ ಶನಿವಾರ ಆಮೆ ಹಬ್ಬ, ಬೀಚ್ ಸ್ವಚ್ಛತೆ, ಕಡಲಾಮೆ ಜಾಗೃತಿ, ಮರಳು ಶಿಲ್ಪ, ಗಾಳಿಪಟ ಉತ್ಸವ ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಕಾಶ್ ಎಸ್. ನಟಲ್ಕರ್, ಶೈನ್ ಶೆಟ್ಟಿ, ಡಾ.ಸೂರ್ಯ, ಆಶಿಶ್ ರೆಡ್ಡಿ, ಭರತ್ ಬಂಗೇರಾ, ರಾಕೇಶ್ ಸೋನ್ಸ್, ಗಣಪತಿ. ದಿನೇಶ್ ಇದ್ದರು.
ಕುಂದಾಪುರ ಸಮೀಪದ ಕೋಡಿಯ ಕಡಲ ಕಿನಾರೆಯಲ್ಲಿ ಶನಿವಾರ ಆಮೆ ಹಬ್ಬ, ಬೀಚ್ ಸ್ವಚ್ಛತೆ, ಕಡಲಾಮೆ ಜಾಗೃತಿ, ಮರಳು ಶಿಲ್ಪ, ಗಾಳಿಪಟ ಉತ್ಸವ ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಕಾಶ್ ಎಸ್. ನಟಲ್ಕರ್, ಶೈನ್ ಶೆಟ್ಟಿ, ಡಾ.ಸೂರ್ಯ, ಆಶಿಶ್ ರೆಡ್ಡಿ, ಭರತ್ ಬಂಗೇರಾ, ರಾಕೇಶ್ ಸೋನ್ಸ್, ಗಣಪತಿ. ದಿನೇಶ್ ಇದ್ದರು.   

ಕುಂದಾಪುರ: ‘ವಿನಾಶದ ಅಂಚಿನಲ್ಲಿ ಇರುವ ಹಾಗೂ ಅತ್ಯಪೂರ್ವವಾಗಿರುವ ಕಡಲ ಜೀವಿಗಳ ಬಗ್ಗೆ ಕಾಳಜಿ ಅತಿ ಅಗತ್ಯವಾಗಿದೆ. ಸರ್ಕಾರದ ಇಲಾಖೆಗಳು, ಸಂಘ-ಸಂಸ್ಥೆಗಳು, ಸ್ವಯಂ ಸೇವಕ ಸಂಘಟನೆಗಳಿಗಿಂತ ಕಡಲ ಪ್ರದೇಶದಲ್ಲಿನ ಮೀನುಗಾರರು ಹಾಗೂ ನಿವಾಸಿಗಳು ಕಡಾಲಾಮೆಗಳ ಸಂರಕ್ಷೆಯ ರಾಯಭಾರಿಗಳಾಗಬೇಕು’ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಕೋಡಿಯ ಕಡಲ ಕಿನಾರೆಯಲ್ಲಿ ಶನಿವಾರ ಅರಣ್ಯ ಇಲಾಖೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಆಮೆ ಹಬ್ಬ, ಬೀಚ್ ಸ್ವಚ್ಛತೆ, ಕಡಲಾಮೆ ಜಾಗೃತಿ, ಮರಳು ಶಿಲ್ಪ, ಗಾಳಿಪಟ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮೈಸೂರು ಸುತ್ತ ಅರಣ್ಯ ಹಾಗೂ ಕಾಡುಗಳಿರುವುದರಿಂದ ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಸಹಜವಾಗಿ ಆಸಕ್ತಿ ಬೆಳೆದಿದೆ. ಕರಾವಳಿ ಪ್ರದೇಶಗಳಲ್ಲಿ ಕಡಲ ಜೀವಿಗಳು ಇರುವುದರಿಂದ ಅವುಗಳ ಸಂರಕ್ಷಣೆಯ ಕಾರ್ಯ ನಡೆಯುತ್ತಿರುವುದು ಸುತ್ಯರ್ಹವಾಗಿದೆ. ಮೀನಿನ ಸಂತತಿ ಉಳಿಯಲು, ಹೆಚ್ಚುತ್ತಿರುವ ಜೆಲ್ಲಿ ಫಿಶ್‌ಗಳ ನಾಶಕ್ಕೆ ಕಡಲಾಮೆಗಳ ರಕ್ಷಣೆ ಅತೀ ಅಗತ್ಯವಾಗಿ ಆಗಬೇಕಿದೆ. ಸಮುದ್ರ ಕಿನಾರೆಯ ತೀರಗಳಲ್ಲಿ ಅನಗತ್ಯವಾಗಿ ಹೆಚ್ಚುತ್ತಿರುವ ತ್ಯಾಜ್ಯಗಳೂ ಕಡಲಾಮೆಗಳ ಬೆಳವಣಿಗೆಗೆ ಮಾರಕವಾಗಿದೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳು ನಾಂದಿಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಾಮಾಜಿಕ ಜಾಲತಾಣಗಳ ಮೂಲಕ ಕಡಲ ಪರಿಸರ ಸ್ವಚ್ಛತೆ ಹಾಗೂ ಜೀವಿಗಳ ಸಂರಕ್ಷಣೆಯ ಚಟುವಟಿಕೆಗಳನ್ನು ನೋಡಿ ಇಲ್ಲಿಗೆ ಬರಬೇಕು ಎನ್ನುವ ಹಂಬಲ ಇದ್ದರೂ, ಕೋವಿಡ್ ಹಾಗೂ ಇತರ ಕಾರಣಗಳಿಂದ ಬರಲಾಗಲಿಲ್ಲ. ಆಮೆ ಹಬ್ಬದ ಮೂಲಕ ಅವಕಾಶ ದೊರಕಿರುವುದಕ್ಕೆ ಸಂತೋಷವಿದೆ ಎಂದು ಹೇಳಿದರು.

ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನಟಲ್ಕರ್ ಮಾತನಾಡಿ, ‘ಹೆಚ್ಚುತ್ತಿರುವ ಪರಿಸರ ನಾಶ ಹಾಗೂ ತ್ಯಾಜ್ಯ ನಿರ್ವಹಣೆಯ ಅಸಡ್ಡೆಯಿಂದಾಗಿ ಎಲ್ಲೆಂದರಲ್ಲಿ ಮಾಲಿನ್ಯಗಳು ಹೆಚ್ಚಾಗಿ ಪರಿಸರದ ಅಸಮತೋಲವಾಗುತ್ತಿದೆ. ಕಡಲ ಕಿನಾರೆಗಳು ಸಹ ಇದರಿಂದ ಹೊರತಾಗಿಲ್ಲ. ಕಿನಾರ ಪ್ರದೇಶಗಳ ಸ್ವಚ್ಛತೆ, ಕಡಲಾಮೆ ಸೇರಿದಂತೆ ಕಡಲ ಜೀವಿಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಗಳ ಜೊತೆಯಲ್ಲಿ ಸ್ಥಳೀಯರ ಸಹಕಾರವಿದ್ದಾಗ ಮಾತ್ರ, ಸರ್ಕಾರದ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆ’ ಎಂದರು.

ವಿಜ್ಞಾನಿ ಡಾ.ಸೂರ್ಯ, ನಟ ಶೈನ್ ಶೆಟ್ಟಿ, ಕೋಡಿ ಚಕ್ರೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಗೋಪಾಲ್ ಪೂಜಾರಿ, ಕುದುರೆಮುಖ ವನ್ಯಜೀವಿ ಸಂರಕ್ಷಣಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ದಿನೇಶ್, ಆಶಿಶ್ ರೆಡ್ಡಿ, ಎಫ್‌ಎಸ್‌ಎಲ್ ಸಂಘಟನೆಯ ಅಧ್ಯಕ್ಷ ರಾಕೇಶ್ ಸೋನ್ಸ್, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಇದ್ದರು.

ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಎಫ್‌ಎಸ್‌ಎಲ್ ಇಂಡಿ ಯಾದ ವೆಂಕಟೇಶ್ ಸ್ವಾಗತಿಸಿದರು. ಕಲ್ಪನಾ ಭಾಸ್ಕರ್ ವಂದಿಸಿದರು. ಅರಣ್ಯ ಇಲಾಖೆಯ ನಾಗರಾಜ ಪಟವಾಲ್ ನಿರೂಪಿಸಿದರು. ಕುಂದಾಪುರಕ್ಕೆ ಮೊದಲ ಬಾರಿ ಬಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ಬ್ರಹ್ಮ ರಥದ ಪ್ರತಿಕೃತಿಯನ್ನು ಸ್ಮರಣಿಕೆಯಾಗಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.