ADVERTISEMENT

ಕಾಪು ಪುರಸಭೆ ವ್ಯಾಪ್ತಿ: ನೀರಿನಾಸರೆಯಾಗಲಿದೆ ಕುರ್ಕಾಲು ಅಣೆಕಟ್ಟೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 6:47 IST
Last Updated 14 ಏಪ್ರಿಲ್ 2025, 6:47 IST
ಪಾಪನಾಶಿನಿ ನದಿ ಕುರ್ಕಾಲು‌ ಅಣೆಕಟ್ಟೆ
ಪಾಪನಾಶಿನಿ ನದಿ ಕುರ್ಕಾಲು‌ ಅಣೆಕಟ್ಟೆ   

ಕಾಪು (ಪಡುಬಿದ್ರಿ): ಕಾಪು ಪುರಸಭೆ ವ್ಯಾಪ್ತಿಗೆ ಕುರ್ಕಾಲು ಅಣೆಕಟ್ಟೆಯಿಂದ ಶಾಶ್ವತ ಕುಡಿಯುವ ನೀರು ಪೂರೈಸುವ ಮಹತ್ವಕಾಂಕ್ಷಿ ಯೋಜನೆ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ನೀರು ಸರಬರಾಜಿಗೆ ಚಾಲನೆ ನೀಡಲಾಗಿದೆ.

ಕಾಪು ಪಟ್ಟಣ ಮತ್ತು 7 ಗ್ರಾಮಗಳಿಗೆ 8 ಎಂಎಲ್‌ಡಿ ನೀರು ಪೂರೈಸಲು 2015ರಲ್ಲಿ ರಾಜ್ಯ ಸರ್ಕಾರ ₹57.02 ಕೋಟಿಯ ಯೋಜನೆಗೆ ಅನುಮೋದನೆ ನೀಡಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ 2021ರಲ್ಲಿ ಟೆಂಡರ್ ಅಂತಿಮಗೊಳಿಸಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದರು.

ಪುರಸಭೆ ಮತ್ತು ಅಕ್ಕಪಕ್ಕದ  ಗ್ರಾಮಗಳಾದ ಕುರ್ಕಾಲು, ಮೂಡಬೆಟ್ಟು, ಕೋಟೆ, ಮಟ್ಟು, ಏಣಗುಡ್ಡೆ ಇನ್ನಂಜೆ ಹಾಗೂ ಪಾಂಗಾಳ ಗ್ರಾಮಗಳಿಗೆ ವಿವಿಧ ಯೋಜನೆಗಳ ಮೂಲಕ ಕುರ್ಕಾಲು ಗ್ರಾಮದ ಮಣಿಪುರ ಸೇತುವೆಯ ಪಾಪನಾಶಿನಿ ನದಿಯ ಬಳಿ ಇಂಟೇಕ್ ವೆಲ್ ನಿರ್ಮಾಣ, ಜಾಕ್‌ವೆಲ್ ಕಮ್ ಪಂಪ್ ಹೌಸ್, ಸಂಪರ್ಕ ಪೈಪ್‌ಲೈನ್‌ನ, ಪಂಪಿಂಗ್ ಯಂತ್ರಗಳ ಸರಬರಾಜು, ನೀರು ಏರು ಕೊಳವೆಮಾರ್ಗ ನಿರ್ಮಾಣವಾಗಿದೆ.

ADVERTISEMENT

7.10 ಎಂಎಲ್‌ಡಿ ಸಾಮರ್ಥ್ಯ:

ಕುಂಜಾರುಗಿರಿ ಬಳಿ 7.10 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ಮತ್ತು ಶುದ್ಧ ನೀರಿನ ಸಂಗ್ರಹಾಗಾರ ನಿರ್ಮಿಸಲಾಗಿದೆ. ಕುಂಜಾರುಗಿರಿಯಿಂದ ಶುದ್ಧ ನೀರು ಸುಭಾಸ್‌ನಗರ, ಶಂಕರಪುರ, ಇನ್ನಂಜೆ, ಕಲ್ಯಾ ಮೂಲಕ ಪೈಪ್‌ಲೈನ್‌ನಲ್ಲಿ ಕಾಪು ಪುರಸಭೆ ವ್ಯಾಪ್ತಿಗೆ ಸರಬರಾಜಾಗಲಿದೆ.

ಪಟ್ಟಣದ ಎಲ್ಲಾ ವಲಯ ಜಲಾಶಯಗಳಿಗೆ ಸೂಕ್ತ ಸಾಮರ್ಥ್ಯದ ಪಂಪ್ ಸೆಟ್ ಅಳವಡಿಕೆ, ಸಂಪ್‌ ಕಮ್ ಪಂಪ್ ಹೌಸ್ ನಿರ್ಮಾಣವಾಗಿದೆ. ಈ ಯೋಜನೆಯಡಿ ಕಾಪು ಪುರಸಭೆ ವ್ಯಾಪ್ತಿಯಲ್ಲಿ 4 ಸಾವಿರ ಮನೆಗಳಿಗೆ ನಳ್ಳಿ ನೀರು ಸಂಪರ್ಕ ಕಲ್ಪಿಸಲು ಅವಕಾಶವಿದೆ.

ಉಳಿಯಾರುಗೋಳಿ, ಪಡು ವಲಯಗಳಲ್ಲಿ 5 ಲಕ್ಷ ಲೀಟರ್ ಮತ್ತು ಪಕೀರ್ಣಕಟ್ಟೆ ವಲಯಗಳಿಗೆ 10 ಲಕ್ಷ ಲೀ. ಮೇಲ್ಮಟ್ಟದ ಜಲಸಂಗ್ರಹಾಗಾರ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ವ್ಯಾಸದ 31  ಕಿ.ಮೀ. ವಿತರಣಾ ಜಾಲ ನಿರ್ಮಿಸಲಾಗಿದೆ. 2,473 ಗೃಹಗಳಿಗೆ ಸಂಪರ್ಕ ಕಲ್ಪಿಸಿ ಮೂರು ವರ್ಷಗಳ ನಿರ್ವಹಣೆಯನ್ನು ಮಂಡಳಿ ಮಾಡಲಿದೆ. ಪ್ರಾಯೋಗಿಕವಾಗಿ ನೀರು ಪೂರೈಕೆ ಮಾಡಲಾಗಿದೆ.

ಕೇಂದ್ರ ಸರ್ಕಾರ ಪುರಸ್ಕೃತ ಅಮೃತ 2 ಯೋಜನೆಯಡಿ ₹33 ಕೋಟಿಯಲ್ಲಿ ಅನುಮೋದನೆಗೊಂಡಿರುವ ಇದೇ ಕಾಮಗಾರಿ ಮುಂದುವರಿದು ಮೂಳೂರು ವಲಯಗಳಿಗೆ 5 ಲಕ್ಷ ಲೀಟರ್‌ ಮೇಲ್ಮಟ್ಟದ ಜಲಸಂಗ್ರಹಾಗಾರ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ವ್ಯಾಸದ 72 ಕಿ.ಮೀ. ವಿತರಣಾ ಜಾಲವನ್ನು ಕಲ್ಪಿಸಲಾಗಿದೆ.

ಕಾಪು ಮತ್ತು ಅಕ್ಕಪಕ್ಕದ  ಗ್ರಾಮಗಳಾದ ಕುರ್ಕಾಲು, ಮೂಡಬೆಟ್ಟು, ಕೋಟೆ, ಮಟ್ಟು, ಏಣಗುಡ್ಡೆ, ಇನ್ನಂಜೆ ಮತ್ತು ಪಾಂಗಾಳ ಗ್ರಾಮಗಳ ಟ್ಯಾಂಕ್‌ಗಳಿಗೆ ಘಟಕದಿಂದ ನೀರು ಸರಬರಾಜು ಮಾಡಲು ಅಗತ್ಯವಿರುವ ಪೈಪ್ ಲೈನ್, ಪಂಪ್‌, ಪಂಪ್ ಹೌಸ್ ಹಾಗೂ ಇತರ ಕಾಮಗಾರಿಗಳ ₹27.60 ಕೋಟಿಯ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅನುಮೋದನೆಗೆ ಕಾಯಲಾಗುತ್ತಿದೆ.

ರಾಜ್ಯ ಸರ್ಕಾರದ ಅನುದಾನದಡಿ ಈ ಎಲ್ಲಾ ಗ್ರಾಮಗಳಿಗೆ ಪೂರೈಕೆಗಾಗಿ ಒಟ್ಟು 2.10 ಎಂಎಲ್‌ಡಿ ನೀರನ್ನು ಕುಂಜಾರುಗಿರಿ ನೀರು ಶುದ್ಧೀಕರಣ ಘಟಕದ ಜಲಸಂಗ್ರಹಾಗಾರದವರೆಗೆ ಕಾಯ್ದಿರಿಸಲಾಗಿದೆ. ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಮೂಲಕ ಮುಂಬರುವ ದಿನಗಳಲ್ಲಿ ನೀರು ಸರಬರಾಜು ಆಗುವ ಸಾಧ್ಯತೆ ಇದೆ.

ನಳ್ಳಿ ನೀರು ಸಂಪರ್ಕ ಬಾಕಿಯಿರುವ ಮನೆಗಳ ಪಟ್ಟಿ ಸಿದ್ದ ಪಡಿಸಲಾಗುತ್ತದೆ. ಸದ್ಯಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ನೀರನ ಸಮಸ್ಯೆ ಇಲ್ಲ. ಕುರ್ಕಾಲು ಅಣೆಕಟ್ಟುವಿನಿಂದ ನೀರು ಪೂರ್ಣ ಪ್ರಮಾಣದಲ್ಲಿ ಸರಬರಾಜು ಆದಲ್ಲಿ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ
ನಾಗರಾಜ ಸಿ. ಮುಖ್ಯಾಧಿಕಾರಿ ಕಾಪು ಪುರಸಭೆ
ಕುರ್ಕಾಲು ಅಣೆಕಟ್ಟೆಯಿಂದ 7 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಬಗ್ಗೆ ವಿಸ್ಕೃತ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಇಲಾಖೆ ವತಿಯಿಂದ ಅನುಷ್ಠಾನಗೊಳ್ಳಲಿರುವ ಈ ಯೋಜನೆಯ ಶೀಘ್ರ ಅನುಮೋದನೆಗೆ ಪ್ರಯತ್ನಿಸಲಾಗುವುದು
ಗುರ್ಮೆ ಸುರೇಶ್ ಶೆಟ್ಟಿ ಶಾಸಕರು ಕಾಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.