ADVERTISEMENT

ಸೆ.25ಕ್ಕೆ ರತ್ನಶ್ರೀ ಆರೋಗ್ಯಧಾಮ ಉದ್ಘಾಟನೆ

ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜು ಆವರಣದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 13:00 IST
Last Updated 24 ಸೆಪ್ಟೆಂಬರ್ 2021, 13:00 IST
ರತ್ನಶ್ರೀ ಆರೋಗ್ಯ ಧಾಮ
ರತ್ನಶ್ರೀ ಆರೋಗ್ಯ ಧಾಮ   

ಉಡುಪಿ: ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗಿರುವ ರತ್ನಶ್ರೀ ಆರೋಗ್ಯ ಧಾಮ ಸೆ. 25ರಂದು ಉದ್ಘಾಟನೆಗೊಳ್ಳಲಿದೆ ಎಂದು ಎಸ್‌ಡಿಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಸ್‌.ನಾಗರಾಜ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಜಿರೆಯ ಎಸ್‌ಡಿಎಂ ಎಜುಕೇಷನಲ್ ಸೊಸೈಟಿ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಬಂದರು, ಜಲ ಸಾರಿಗೆ ಹಾಗೂ ಆಯುಷ್ ಖಾತೆ ಸಚಿವ ಸರ್ಬಾನಂದ ಸೋನಾವಾಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಆಸ್ಪತ್ರೆ ಆವರಣದಲ್ಲಿರುವ ಸರಸ್ವತಿ ವಿಗ್ರಹವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅನಾವರಣಗೊಳಿಸಲಿದ್ದಾರೆ. ಡಿಲಕ್ಸ್ ವಾರ್ಡ್ ಅನ್ನು (ಹೆಲ್ತ್ ಕಾಟೇಜ್) ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಧ್ಯಾನ ಮಂದಿರವನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಶೃಂಗಾರ (ಆಸ್ತೆಟಿಕ್ ಮೆಡಿಸಿನ್) ವಿಭಾಗವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಂಚಕರ್ಮ ಕೇಂದ್ರವನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್, ವಿಶೇಷ ವಾರ್ಡ್‌ ಅನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ ಎಂದು ವಿವರ ನೀಡಿದರು.

ADVERTISEMENT

ಆಯುರ್ವೇದ ಆಸ್ಪತ್ರೆಯ ಭಾವಪ್ರಕಾಶ ಆಡಿಟೋರಿಯಂನಲ್ಲಿ ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಡಾ.ಬಿ.ಯಶೋವರ್ಮ. ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಪ್ರೊ.ಎಸ್.ಪ್ರಭಾಕರ್, ನಿರ್ದೇಶಕ ಡಿ.ಶ್ರೇಯಸ್ ಕುಮಾರ್, ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ವಿ.ಮಮತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.

1958ರಲ್ಲಿ ಕರ್ನಾಟಕ ಆಯುರ್ವೇದ ಸಂಸ್ಥೆ ಹೆಸರಿನಲ್ಲಿ ಸ್ಥಾಪನೆಯಾದ ಸಂಸ್ಥೆಯು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ 1977ರಲ್ಲಿ ಬಿಎಎಂಎಸ್ ಶಿಕ್ಷಣ ಆರಂಭಿಸಿತು. ನಂತರ ಸ್ನಾತಕೋತ್ತರ ವಿಭಾಗ, 6 ಪಿಎಚ್.ಡಿ ವಿಭಾಗಗಳು, ಸಂಶೋಧನೆ ವಿಭಾಗಗಳು ಕಾರ್ಯಾರಂಭಗೊಂಡವು. ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಯಲ್ಲಿದ್ದಾರೆ ಎಂದರು.

50 ಹಾಸಿಗೆಗಳಿಂದ ಆರಂಭಗೊಂಡ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ 310 ಹಾಸಿಗೆಗಳಿವೆ. 125 ಹಾಸಿಗೆಗಳನ್ನು ಬಡವರಿಗೆ ಕನಿಷ್ಟ ದರದಲ್ಲಿ ಚಿಕಿತ್ಸೆ ನೀಡಲು ಮೀಸಲಿಡಲಾಗಿದೆ. ದೇಶ ವಿದೇಶಗಳಿಂದಲೂ ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯೆ ಡಾ. ಚೈತ್ರಾ ಹೆಬ್ಬಾರ್, ಪಿಆರ್‌ಒ ಡಾ.ಶ್ರೀನಿಧಿ ಬಳ್ಳಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.