ADVERTISEMENT

ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಕ್ಕೆ ಕ್ರಮ: ಸಾರಿಗೆ ಸಚಿವ ಸವದಿ

ಬೆಂಗಳೂರಿನಲ್ಲಿ ಪ್ರಾಯೋಗಿಕ ಅನುಷ್ಠಾನ: ಸಾರಿಗೆ ಸಚಿವ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 14:27 IST
Last Updated 31 ಜನವರಿ 2021, 14:27 IST
₹ 39.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನಗರ ಸಾರಿಗೆ ಬಸ್ ನಿಲ್ದಾಣವನ್ನು ಭಾನುವಾರ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಿಸಿದರು.
₹ 39.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನಗರ ಸಾರಿಗೆ ಬಸ್ ನಿಲ್ದಾಣವನ್ನು ಭಾನುವಾರ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಿಸಿದರು.   

ಉಡುಪಿ: ರಾಜ್ಯದ ನಗರ ಸಾರಿಗೆಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ 350 ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಓಡಿಸಲು ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೂ ಆದ ಲಕ್ಷ್ಮಣ ಸವದಿ ಹೇಳಿದರು.

ಭಾನುವಾರ ₹ 39.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನಗರ ಸಾರಿಗೆ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭವಾಗಲಿದೆ. ಬಳಿಕ ಎಲ್ಲ ನಗರಗಳಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸಲು ಕ್ರಮ ವಹಿಸಲಾಗುವುದು ಎಂದರು.

ರಾಜ್ಯದಲ್ಲಿ ಎಲೆಕ್ಟಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ರಸ್ತೆ ತೆರಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತಿದೆ. ಪ್ರಸ್ತುತ 26,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳಿವೆ. ಇಂಧನದಲ್ಲಿ ಶೇ 20ರಷ್ಟು ಇಥೆನಾಲ್ ಮಿಶ್ರಣ ಮಾಡುವುದರಿಂದ ಇಂಧನ ವೆಚ್ಚ ತಗ್ಗಿಸಲು ಸಾಧ್ಯವಿದೆ ಎಂದರು.

ADVERTISEMENT

ಉಡುಪಿಯ ಬನ್ನಂಜೆಯಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಡಾ.ವಿ.ಎಸ್.ಆಚಾರ್ಯ ಅವರ ಹೆಸರು ಇಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಟ್ಯಾಕ್ಸಿ ಮಾಲೀಕರ ಮನವಿಗಳ ಬಗ್ಗೆ ಅಧಿವೇಶನಲ್ಲಿ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ವ್ಯವಸ್ಥೆ ಅನ್ಯೋನ್ಯತೆಯಿಂದ ನಡೆಯುತ್ತಿದೆ. ಎರಡೂ ವಲಯಗಳಲ್ಲಿ ಅನಾರೋಗ್ಯಕರ ಪೈಪೋಟಿ ಇಲ್ಲದೆ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಒದಗಿಸಬೇಕು. ನಗರ ವ್ಯಾಪ್ತಿಯ ಆಟೋಗಳಿಗೆ ಅಂತಿಮ ಗಡವು ವಿಧಿಸಿ ಒಂದು ಬಾರಿ ಪರ್ಮಿಟ್ ನೀಡಿ, ಕಲರ್ ಕೋಡಿಂಗ್‌ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಮಾತನಾಡಿ, ‘ಡೀಸೆಲ್ ಬೆಲೆ ಏರಿಕೆಯಾಗಿದ್ದರೂ ಪ್ರಯಾಣ ದರ ಹೆಚ್ಚಿಸದೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ನಿಗಮದ 1.30 ಲಕ್ಷ ನೌಕರರ ವೇತನಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಸಹಕರದೊಂದಿಗೆ ಸಂಸ್ಥೆಯನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುವುದು’ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕಾಮತ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸರಿಗೆ ನಿಗಮದ ಉಪಾಧ್ಯಕ್ಷ ಈಶ್ವರಪ್ಪ, ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್‌ಪಿ ವಿಷ್ಣುವರ್ಧನ್, ಹೆಚ್ಚುವರಿ ಸಾರಿಗೆ ಆಯುಕ್ತ ನರೇಂದ್ರ ಹೋಲ್ಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಇದ್ದರು.

ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ಅರುಣ ಸ್ವಾಗತಿಸಿದರು. ವಿಭಾಗೀಯ ಸಂಚಲನಾಧಿಕಾರಿ ಕುಮಲ್ ಕುಮಾರ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.