ADVERTISEMENT

ಮಣಿಪಾಲದಲ್ಲಿ ಮಿಲಾಪ್ ಸಾಹಿತ್ಯೋತ್ಸವ

ಡಿಜಿಟಲ್‌ ಕಾಲಘಟ್ಟದ ಬೆಳವಣಿಗೆ, ಸವಾಲುಗಳ ಕುರಿತು ಸಂವಾದ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 15:28 IST
Last Updated 11 ನವೆಂಬರ್ 2019, 15:28 IST
ಮಣಿಪಾಲದ ಟಿಎಂಎ ಪೈ ಸಭಾಂಗಣದಲ್ಲಿ 2019ನೇ ಆವೃತ್ತಿಯ ಮಿಲಾಪ್ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದ ತಜ್ಞರು.
ಮಣಿಪಾಲದ ಟಿಎಂಎ ಪೈ ಸಭಾಂಗಣದಲ್ಲಿ 2019ನೇ ಆವೃತ್ತಿಯ ಮಿಲಾಪ್ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದ ತಜ್ಞರು.   

ಉಡುಪಿ: ಮಣಿಪಾಲದ ಟಿಎಂಎ ಪೈ ಸಭಾಂಗಣದಲ್ಲಿ 2019ನೇ ಆವೃತ್ತಿಯ ಮಿಲಾಪ್ ಸಾಹಿತ್ಯೋತ್ಸವ ಸೋಮವಾರ ಸಮಾಪನಗೊಂಡಿತು.

ಡಿಜಿಟಲ್‌ ಜಗತ್ತಿನಲ್ಲಿ ಸೃಜನಾತ್ಮಕ ಅಭಿವ್ಯಕ್ತಿಯ ಕುರಿತು ತಜ್ಞರು ವಿಷಯ ಮಂಡಿಸಿದರು. ಅಡುಗೆ ಕಲೆಯಿಂದ ಹಸ್ತಪ್ರತಿಗಳವರೆಗೆ, ಮುಂಚೂಣಿಯ ಮಾಧ್ಯಮಗಳಿಂದ ಸಂಗೀತ ಹಾಗೂ ಪ್ರಕಾಶನದವರೆಗೂ ಚರ್ಚೆಗಳು ನಡೆದವು.

ಸಂವಾದದಲ್ಲಿ ಅನುಶ್ರುತಿ, ಹಾಗೂ ತಿರುಜ್ಞಾನಸಾಂಬನಾಥಮ್‌, ರಾಹುಲ್‌ ಪುಟ್ಟಿ ಅವರು, ‘ಡಿಜಿ ಕುಕರಿ ಗ್ಯಾಸ್ಟ್ರೊನಮಿ ಇನ್‌ ವರ್ಚ್ಯುವಲ್‌ ವರ್ಲ್ಡ್‌’ ವಿಷಯದ ಕುರಿತು ಚರ್ಚಿಸಿದರು.

ADVERTISEMENT

ಸಾಂಪ್ರದಾಯಿಕ ಪಾಕ ವಿಧಾನಗಳನ್ನು ದೀರ್ಘಕಾಲ ಸಂರಕ್ಷಿಸಿಡುವುದರ ಬಗ್ಗೆ ಹಾಗೂ ಅನುಭವಿ ಬಾಣಸಿಗರು ಮತ್ತು ತಂತ್ರಜ್ಞಾನದ ಸಹಾಯದಿಂದ ಸಾಂಪ್ರದಾಯಿಕ ಖಾದ್ಯಗಳನ್ನು ಮತ್ತೆ ಮುನ್ನಲೆಗೆ ತರುವ ಅಗತ್ಯದ ಬಗ್ಗೆ ತಜ್ಞರು ವಿಚಾರ ಮಂಡಿಸಿದರು.

ಪ್ರಸ್ತುತ ಆಹಾರ ತಯಾರಿಕೆಯ ವಿಚಾರವಾಗಿ ಹುಟ್ಟಿಕೊಂಡಿರುವ ಅಸಂಖ್ಯ ಬ್ಲಾಗ್‌ಗಳು ಜಗತ್ತಿನ ಸಾಂಪ್ರದಾಯಿಕ ಅಡುಗೆ ತಯಾರಿಸುವ ವಿಧಾನವನ್ನು ಪರಿಚಯಿಸುತ್ತಿವೆ. ಆದರೆ, ಒಟ್ಟಾಗಿ ಕುಳಿತು ಊಟಮಾಡುವ ಸಂಸ್ಕೃತಿ ಮರೆಯಾಗುತ್ತಿದೆ. ಜತೆಗೆ, ಅಡುಗೆಯನ್ನು ಹೊಗಳವು ಕಲೆಯೂ ದೂರವಾಗುತ್ತಿದೆ ಎಂದು ವಿಷಾಧಿಸಿದರು.

ದೀಪ್ತಿ ಎಸ್‌.ತ್ರಿಪಾಟಿ, ಅಕಾನೆ ಸೈತೊ, ಡಿ.ವೆಂಕಟ್‌ರಾವ್‌ ಹಾಗೂ ಅರವಿಂದ್ ಭಟ್‌ ಅವರ ತಂಡ ಹಸ್ತಪ್ರತಿಗಳಿಂದ ಡಿಜಿಟಲ್‌ ಪ್ರತಿಗಳವರೆಗಿನ ಬದಲಾವಣೆಯ ಕಾಲಘಟ್ಟ ಕುರಿತು ಚರ್ಚಿಸಿದರು.

ಸುದೀಪ್‌ ನಿಗಮ್‌, ಅಭಿಜಿತ್ ದೇಶಪಾಂಡೆ, ಸಿದ್ಧಾರ್ಥ್‌ ಜೈನ್‌ ಹಾಗೂ ಪ್ರೀತಿ ಸಿಂಗ್ ತಂಡ ‘ವೆಬ್‌ತಾಣಗಳ ಪ್ರಭಾವ ಹಾಗೂ ಅವುಗಳ ಮೇಲಿನ ನಿಯಂತ್ರಣ’ ಕುರಿತು ಸಂವಾದ ನಡೆಸಿದರು. ಮನು ಚಕ್ರವರ್ತಿ, ರೊಮಲ್ ಸಿಂಗ್‌, ಮುರಳೀಧರ ಉಪಾಧ್ಯ ಹಾಗೂ ನೀತಾ ಇನಾಂದಾರ್ ತಂಡ ಪ್ರಕಾಶನದ ಸವಾಲುಗಳ ಕುರಿತು ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.