ADVERTISEMENT

ಸತ್ಯ ಪ್ರಮಾಣಕ್ಕೆ ಪುಣ್ಯಕ್ಷೇತ್ರಕ್ಕೆ ಬರಲಿ: ಮೆಂಡನ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 6:09 IST
Last Updated 18 ಅಕ್ಟೋಬರ್ 2022, 6:09 IST
ಲಾಲಾಜಿ ಮೆಂಡನ್‌
ಲಾಲಾಜಿ ಮೆಂಡನ್‌   

ಕಾಪು (ಪಡುಬಿದ್ರಿ): ‘ಮುಸ್ಲಿಂ ಸಮುದಾಯದ ಮತವನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಎಸ್‌ಡಿಪಿಐ ಪಕ್ಷ ಬಂದಮೇಲೆ ತಲೆನೋವು ಶುರುವಾಗಿದೆ. ತಮ್ಮ ಖಾತೆಯಲ್ಲಿದ್ದ ಮತಗಳು ಅವರ ಪಾಲಾಗುತ್ತಿವೆ ಎಂಬ ಕೋಪ ಮತ್ತು ಅಸೂಯೆಯಿಂದ ಕಾಪು ವಿಧಾಸಭಾ ಕ್ಷೇತ್ರದ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಕಾಪು ಶಾಸಕ ಲಾಲಾಜಿ ಮೆಂಡನ್ ಟೀಕಿಸಿದ್ದಾರೆ.

‘ಬಿಜೆಪಿ ಮತ್ತು ಎಸ್‌ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು. ಎಸ್‌ಡಿಪಿಐಯವರ ಚುನಾವಣಾ ಖರ್ಚನ್ನು ಬಿಜೆಪಿ ಮಾಡುತ್ತಿದೆ’ ಎಂಬ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಬಿಜೆಪಿ ಮತ್ತು ನನಗೆ, ಎಸ್‌ಡಿಪಿಐ ಪಕ್ಷದೊಂದಿಗೆ ಸಂಬಂಧ ಕಲ್ಪಿಸಿ ನೀಡಿದ ಹೇಳಿಕೆಯನ್ನು ಮೊದಲು ಸೊರಕೆಯವರು ನಿರೂಪಿಸಲಿ. ಇಲ್ಲದಿದ್ದರೆ ಬಹಿರಂಗ ಕ್ಷಮೆಯನ್ನು ಕೇಳಬೇಕು’ ಎಂದು ಆಗ್ರಹಿಸಿದರು.

‘ಬಾಯಿಗೆ ಬಂದ ಹಾಗೆ ಹೇಳಿಕೆ ನೀಡಿರುವ ಸೊರಕೆಯವರು ಹೇಳಿಕೆಗೆ ಪುರಾವೆಯನ್ನು ಒದಗಿಸಲಿ. ಇಲ್ಲವಾದಲ್ಲಿ ಸತ್ಯಪ್ರಮಾಣಕ್ಕೆ ಯಾವುದೇ ಪುಣ್ಯಕ್ಷೇತ್ರಕ್ಕೆ ಬರಲಿ ನಾನು ಸಿದ್ಧನಿದ್ದೇನೆ. ಹೀಗೆ ಮುಂದುವರಿದರೆ ‘ಮತಿಗೆಟ್ಟ ಸೊರಕೆ’ ಎಂದು ಹೊಸ
ನಾಮಕರಣ ಅವರಿಗೆ
ಮಾಡಬೇಕಾದ ಅನಿವಾರ್ಯತೆಯನ್ನು ಅವರೇ ಸೃಷ್ಟಿಸಿಕೊಳ್ಳುತ್ತಾರೆ’ ಎಂದಿದ್ದಾರೆ.

ADVERTISEMENT

‘ಎಸ್‌ಡಿಪಿಐ ಮಾತೃ ಸಂಘಟನೆಯಾದ ಪಿಎಫ್‌ಐಯನ್ನು ನಿಷೇಧ ಮಾಡಿದ ಬಿಜೆಪಿಯವರಿಗೆ ಎಸ್‌ಡಿಪಿಐ ಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯವೇನಿದೆ? ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪುರಸಭೆಯಲ್ಲಿ ಆಗಲಿ ಅಥವಾ ನಮ್ಮ ಉಡುಪಿ ಜಿಲ್ಲೆಯಲ್ಲಿ ಹಲವು ಪಂಚಾಯಿತಿಗಳಲ್ಲಿ ಕಾಂಗ್ರೆಸ್ - ಎಸ್‌ಡಿಪಿಐ ಒಳಒಪ್ಪಂದ
ಮತ್ತು ಮೈತ್ರಿಯ ಅಧಿಕಾರ ಹಿಡಿರುವುದು ತಿಳಿದಿದೆ. ಹಾಗಿದ್ದಲ್ಲಿ ನಮ್ಮ ಮೇಲೆ ಯಾವ ನೈತಿಕತೆ ಆಧಾರದಲ್ಲಿ ಸೊರಕೆಯವರು ಆರೋಪ ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.