ADVERTISEMENT

ಕಾರ್ಕಳಕ್ಕೆ ಬಹುಪಯೋಗಿ ಕ್ರೀಡಾಂಗಣ ಮಂಜೂರು

3.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ

ಪ್ರಜಾವಾಣಿ ವಿಶೇಷ
Published 9 ನವೆಂಬರ್ 2020, 15:25 IST
Last Updated 9 ನವೆಂಬರ್ 2020, 15:25 IST

ಉಡುಪಿ: ಕಾರ್ಕಳ ತಾಲ್ಲೂಕಿನಲ್ಲಿ ಬಹುಪಯೋಗಿ ಕ್ರೀಡಾಂಗಣದ ಸೌಲಭ್ಯವಿಲ್ಲ ಎಂಬ ಕೊರಗು ಹಲವು ವರ್ಷಗಳಿಂದ ಕ್ರೀಡಾಪಟುಗಳನ್ನು ಕಾಡುತ್ತಿತ್ತು. ಬಹುದಿನಗಳ ಈ ಕೊರಗಿಗೆ ಶೀಘ್ರ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗುತ್ತಿದೆ.

ಖೇಲೋ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಮಲ್ಟಿಪರ್ಪಸ್‌ ಕ್ರೀಡಾಂಗಣ ನಿರ್ಮಿಸಲು ನಿರ್ಧರಿಸಿದ್ದು, ಕಾರ್ಕಳ ತಾಲ್ಲೂಕು ಕೂಡ ಪಟ್ಟಿಯಲ್ಲಿದೆ. ಕಾರ್ಕಳದಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣವಾದರೆ, ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಾಧನೆ ತೋರಲು ನೆರವಾಗಲಿದೆ.

₹ 3.5 ಕೋಟಿ ಅನುದಾನ

ADVERTISEMENT

ಬಹುಪಯೋಗಿ ಕ್ರೀಡಾಂಗಣ ನಿರ್ಮಾಣಕ್ಕೆ ₹ 3.5 ಕೋಟಿ ಅನುದಾನ ಸಿಗಲಿದ್ದು, ಷಟಲ್‌ ಬ್ಯಾಡ್ಮಿಂಟನ್‌, ಜಿಮ್ನಾಶಿಯಂ, ಟೇಬಲ್‌ ಟೆನಿಸ್‌, ಬಾಸ್ಕೆಟ್‌ ಬಾಲ್, ವಾಲಿಬಾಲ್‌ ಸೇರಿದಂತೆ ಒಳಾಂಗಣ ಕ್ರೀಡೆಗಳಿಗೆ ಅನುಕೂಲವಾಗುವ ಅಂಗಳಗಳನ್ನು ನಿರ್ಮಿಸಬಹುದು. ಜತೆಗೆ, ಕ್ರೀಡಾಪಟುಗಳಿಗೆ ಶೌಚಾಲಯ, ಬಟ್ಟೆ ಬದಲಿಸುವ ಕೋಣೆಗಳ ವ್ಯವಸ್ಥೆ ಸಿಗಲಿದೆ.

ಅನುಕೂಲಗಳು ಏನು:ಕಾರ್ಕಳದಲ್ಲಿ ಉದಯೋನ್ಮುಖ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಿದೆ. ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ, ಸುಖೇಶ್‌ ಹೆಗ್ಡೆ, ಅಂತರರಾಷ್ಟ್ರೀಯಲಾಂಗ್‌ಜಂಪ್‌ ಆಟಗಾರ್ತಿ ನಮಿತಾ ಕೂಡ ಇಲ್ಲಿಯವರೇ. ತಾಲ್ಲೂಕಿನಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಬರವಿಲ್ಲದಿದ್ದರೂ ತರಬೇತಿ ಪಡೆಯಲು ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ಇರಲಿಲ್ಲ.

ಕ್ರೀಡಾಪಟುಗಳು ಪ್ರತಿನಿತ್ಯ ಅಭ್ಯಾಸ ಮಾಡಲು ಕಾರ್ಕಳದಿಂದ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ಆರ್ಥಿಕ ಸಮಸ್ಯೆ ಹಾಗೂ ಸಮಯದ ಅಭಾವದಿಂದ ಹಲವರು ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕ್ರೀಡೆಯಿಂದ ದೂರ ಸರಿಯುವಂತಾಗಿದೆ. ಹೊಸ ಕ್ರೀಡಾಂಗಣ ನಿರ್ಮಾಣವಾದರೆ ತವರಿನಲ್ಲಿಯೇ ಕ್ರೀಡಾಪಟುಗಳು ಅಭ್ಯಾಸ ಮಾಡಬಹುದು. ಜತೆಗೆ, ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳ ಆಯೋಜನೆಗೆ ವೇದಿಕೆ ಸಿಗಲಿದ್ದು, ತಾಲ್ಲೂಕಿನಲ್ಲಿ ಕ್ರೀಡಾಪಟುಗಳು ಸಂಖ್ಯೆ ಹೆಚ್ಚಾಗಲಿದೆ.

ಈಗಿರುವ ತಾಲ್ಲೂಕು ಕ್ರೀಡಾಂಗಣದ ಜಾಗದಲ್ಲಿಯೇ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಲಿದೆ. ಕ್ರೀಡಾಪಟುಗಳಿಂದ ಹೆಚ್ಚು ಬೇಡಿಕೆ ಇರುವ ಕ್ರೀಡೆಗಳ ಅಂಗಳವನ್ನು ಆರಂಭದಲ್ಲಿ ನಿರ್ಮಿಸಲಾಗುವುದು. ಬಳಿಕ ಹಂತ ಹಂತವಾಗಿ ವಿಸ್ತರಿಸಲಾಗುವುದು. ಈ ಸಂಬಂಧ ಶೀಘ್ರವೇ ಯುವಸಬಲೀಕರಣ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಹಳ್ಳಿಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಹೆಚ್ಚಾಗಿದ್ದಾರೆ. ಸೂಕ್ತ ತರಬೇತಿ ಹಾಗೂ ಕ್ರೀಡಾಂಗಣದ ಸೌಲಭ್ಯ ಇರದ ಕಾರಣ ಅವರ ಪ್ರತಿಭೆ ಬೆಳಕಿಗೆ ಬರುತ್ತಿಲ್ಲ. ಕ್ರೀಡಾಂಗಣ ನಿರ್ಮಾಣವಾದರೆ ಕ್ರೀಡಾಪ್ರತಿಭೆಗಳು ಮುನ್ನಲೆಗೆ ಬರಲಿವೆ ಎಂದರು ಶಾಸಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.