ADVERTISEMENT

ವಾರಾಹಿ ಕಾಮಗಾರಿ: ಸಾರ್ವಜನಿಕರಿಗೆ ಕಿರಿಕಿರಿ

ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 24 ಮೇ 2022, 14:34 IST
Last Updated 24 ಮೇ 2022, 14:34 IST
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಿತ್ರಾ ನಾಯಕ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು.
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಿತ್ರಾ ನಾಯಕ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು.   

ಉಡುಪಿ: ನಗರದಲ್ಲಿ ವಾರಾಹಿ ಯೋಜನೆಯಡಿ ಕುಡಿಯುವ ನೀರಿನ ಪೂರೈಕೆ ಪೈಪ್‌ಲೈನ್ ಕಾಮಗಾರಿ ವಿಳಂಬವಾಗಿ ಸಾಗುತ್ತಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ನಗರಸಭೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಿತ್ರಾ ನಾಯಕ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಪೈಪ್‌ಲೈನ್ ಅಳವಡಿಕೆ ಕಾಮಗಾರಿಯಿಂದ ರಸ್ತೆಗಳು ಗುಂಡಿಬಿದ್ದಿವೆ. ಕೆಸರು ತುಂಬಿಕೊಂಡು ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸದಸ್ಯರು ಆರೋಪಿಸಿದರು.

ಕಾಮಗಾರಿಗೆ ಗುಂಡಿಗಳನ್ನು ತೆಗೆದು ಹಾಗೆಯೇ ಬಿಡಲಾಗಿದೆ. ಮಣ್ಣು ರಸ್ತೆ ಮೇಲೆ ಹರಡಿ ಕೆಸರಿನಿಂದ ರಾಡಿಯಾಗಿದ್ದು ಸಮಸ್ಯೆಯಾಗಿದೆ. ಕುಂಜಿಬೆಟ್ಟು, ಓಶಿಯನ್‌ ಪರ್ಲ್ ಹೊಟೇಲ್ ಸಮೀಪದ ಇಂಟರ್‌ಲಾಕ್ ಕಾಮಗಾರಿಯೂ ಮುಗಿದಿಲ್ಲ ಎಂದು ಸದಸ್ಯರು ಸಮಸ್ಯೆ ಬಿಚ್ಚಿಟ್ಟರು.

ADVERTISEMENT

ಮಳೆಯ ಕಾರಣದಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವುದಾಗಿ ವಾರಾಹಿ ಯೋಜನೆಯ ಎಇಇ ಅರಕೇಶ್ ಗೌಡ ಹಾಗೂ ಎಂಜಿನಿಯರ್ ರಾಜಶೇಖರ್ ಸಭೆಗೆ ತಿಳಿಸಿದರು.

ಮಳೆಗಾಲ ಆರಂಭವಾಗುವ ಮುನ್ನವೇ ನಗರದ ಚರಂಡಿಗಳ ಹೂಳೆತ್ತಬೇಕು. ಮಳೆ ಅನಾಹುತಗಳು ಸೃಷ್ಟಿಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ ಆರಂಭವಾಗಿದ್ದರೂ ನಗರದಲ್ಲಿ ಮುಂಗಾರು ಅನಾಹುತಗಳನ್ನು ಎದುರಿಸಲು ಸೂಕ್ತ ತಯಾರಿ ಮಾಡಿಕೊಂಡಿಲ್ಲ. ಕೆಲವು ವಾರ್ಡ್‌ಗಳಲ್ಲಿ ಮಾತ್ರ ಚರಂಡಿ ಸ್ವಚ್ಛಗೊಳಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ನಡೆದಿಲ್ಲ ಎಂದು ಎಂದು ವಿರೋಧ ಪಕ್ಷದ ನಾಯಕ್‌ ರಮೇಶ್ ಕಾಂಚನ್‌ ಅಸಮಾಧಾನ ವ್ಯಕ್ತಪಡಿಸಿದರು.

ಕಿನ್ನಿಮೂಲ್ಕಿ ವಾರ್ಡ್ ಸದಸ್ಯೆೆ ಅಮೃತಾ ಕೃಷ್ಣಮೂರ್ತಿ ಕೂಡ ಧನಿಗೂಡಿಸಿ ವಾರ್ಡ್‌ನಲ್ಲಿ ಮಳೆ ನೀರು ಹರಿಯುವ ಬೃಹತ್ ತೋಡಿನ ಹೂಳೆತ್ತಿಲ್ಲ. ಕೂಡಲೇ ಜೆಸಿಬಿ ಮೂಲಕ ಹೂಳೆತ್ತಿ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು. ಇಲ್ಲವಾದರೆ, ಮಳೆಗಾಲದಲ್ಲಿ ನಾಗರಿಕರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ವಾರ್ಡ್‌ನಲ್ಲಿ ತುರ್ತು ಕಾಮಗಾರಿಯ ಬಗ್ಗೆ ವಿವರ ನೀಡಿದರೆ ಕಾಮಗಾರಿಗೆ ಕ್ರಮ ತೆಗೆದುಕೊಳ್ಳುವುದಾಗಿ ಅಧ್ಯಕ್ಷೆ ಸುಮಿತ್ರಾ ನಾಯಕ್‌ ಭರವಸೆ ನೀಡಿದರು.

ಹೆಬ್ರಿ-ಮಲ್ಪೆೆ ರಾಷ್ಟ್ರಿಯ ಹೆದ್ದಾರಿ ವಿಸ್ತರಣೆ ಟೆಂಡರ್ ರದ್ದಾಗಿರುವ ಬಗ್ಗೆ ವಾರ್ಡ್ ಸದಸ್ಯ ಸುಂದರ್ ಜೆ. ಕಲ್ಮಾಡಿ ಅಸಮಾಧಾನ ಹೊರಹಾಕಿದರು.

ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿ ಟೆಂಡರ್‌ನಲ್ಲಿ ಅಗತ್ಯ ಸ್ಪರ್ಧಿಗಳು ಭಾಗವಹಿಸದ ಕಾರಣ ಟೆಂಡರ್ ರದ್ದಾಗಿದೆ. ಈ ಸಂಬಂಧ ಕೇಂದ್ರ ಸಚಿವರ ಜತೆ ಚರ್ಚಿಸಿ ಟೆಂಡರ್‌ ಕರೆಯುವಂತೆ ಮನವಿ ಮಾಡಲಾಗಿದೆ. ಅಧಿಕಾರಿಗಳ ತಪ್ಪಿನಿಂದಾಗಿ ಜನಪ್ರತಿನಿಧಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂದರು.

ನಾಲ್ಕೈದು ತಿಂಗಳಿಂದ ನಿಟ್ಟೂರು ಎಸ್‌ಟಿಪಿ ಶುದ್ಧೀಕರಣ ಘಟಕದಿಂದ ಬ್ಲೀಚಿಂಗ್ ಪೌಡರ್ ಹಾಕದೆ ನೀರು ಬಿಡಲಾಗುತ್ತಿದೆ. ಇದರಿಂದ ದುರ್ವಾಸನೆ, ಸೊಳ್ಳೆೆಗಳ ಹಾವಳಿ ಹೆಚ್ಚಾಗಿದ್ದು ನಾಗರಿಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸದಸ್ಯ ವಿಜಯ ಕೊಡವೂರು ದೂರಿದರು.

ಪರಿಸರ ಎಂಜಿನಿಯರ್ ಸ್ನೇಹಾ ಪ್ರತಿಕ್ರಿಯಿಸಿ ‘ಬ್ಲೀಚಿಂಗ್ ಪೌಡರ್ ನಿರ್ವಹಣೆಗೆ ಸಂಬಂಧಿಸಿದಂತೆ 4 ಬಾರಿ ಟೆಂಡರ್ ಕರೆದರೂ ಯಾರೂ ಟೆಂಡರ್‌ ಹಾಕಲು ಬಂದಿಲ್ಲ. 5ನೇ ಟೆಂಡರ್ ಕರೆಯಲಾಗಿದೆ. 10 ಟನ್ ಬ್ಲೀಚಿಂಗ್ ಪೌಡರ್ ಅನ್ನು ನಗರಸಭೆಯಿಂದ ಖರೀದಿಸಿಡಲಾಗಿದೆ ಎಂದರು.

ಯಂತ್ರೋಪಕರಣಗಳು ಕೆಟ್ಟಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಯುಜಿಡಿ ಕಾಮಗಾರಿಗೆ ನೀಡುವ ಅನುದಾನ ಬಳಸಿಕೊಂಡು ಸುಸಜ್ಜಿತವಾಗಿ ಎಸ್‌ಟಿಪಿ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು ಎಂದರು.

ಯುಜಿಡಿ ಯೋಜನೆ ರೂಪಿಸುವಾಗ ನಗರದ ಕೊಳಚೆ ನೀರು ಇಂದ್ರಾಣಿ ಸೇರದಂತೆ ಎಚ್ಚರವಹಿಸಬೇಕು. ಮಳೆ ಆರಂಭವಾಗುವ ಮುನ್ನವೇ ಇಂದ್ರಾಣಿ ನದಿಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.