ADVERTISEMENT

ಪಿ.ರಾಜಶೇಖರ್‌, ಇಸ್ಮಾಯಿಲ್ ತೋನ್ಸೆಗೆ ಪ್ರಶಸ್ತಿ

ಮುಸ್ಲಿಂ ಒಕ್ಕೂಟದ ಮಾನವರತ್ನ, ಸೇವಾರತ್ನ ಪುರಸ್ಕಾರಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 12:09 IST
Last Updated 4 ಜನವರಿ 2021, 12:09 IST
ಪಿ.ರಾಜಶೇಖರ್‌
ಪಿ.ರಾಜಶೇಖರ್‌   

ಉಡುಪಿ: ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಕೊಡಮಾಡುವ ‘ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮಾನವರತ್ನ’ ಪ್ರಶಸ್ತಿಯನ್ನು ಚಿಂತಕ ಜಿ.ರಾಜಶೇಖರ್ ಹಾಗೂ ‘ಸೇವಾರತ್ನ’ ಪ್ರಶಸ್ತಿಯನ್ನು ಮಹಮ್ಮದ್ ಇಸ್ಮಾಯಿಲ್ ತೋನ್ಸೆ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಯಾಸೀನ್ ಮಲ್ಪೆ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಸೇವಾರಂಗದಲ್ಲಿ ಸಾಧನೆ ಮಾಡಿದವರಿಗೆ ಕೊಡುವ ‘ಮಾನವ ರತ್ನ’ ಹಾಗೂ ‘ಸೇವಾ ರತ್ನ’ ಪ್ರಶಸ್ತಿಯು ₹ 25,000 ಹಾಗೂ ಸ್ಮರಣಿಕೆ ಒಳಗೊಂಡಿದೆ. ಜ.9ರಂದು ಸಂಜೆ 6.15ಕ್ಕೆ ಅಂಬಾಗಿಲಿನಲ್ಲಿರುವ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ‘ಸಮುದಾಯಗಳ ಸ್ನೇಹ ಸಮಾವೇಶ' ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು ನಡೆಯಲಿದೆ.

ಸಮಾವೇಶದಲ್ಲಿ ಜಿಲ್ಲೆಯ 9 ಮಂದಿ ಹಿರಿಯ ಸಾಧಕರನ್ನು ಸನ್ಮಾನಿಸಲಾಗುವುದು. ಕ್ರೈಸ್ತಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಮತ್ಸ್ಯೋದ್ಯಮಿ ಸಾಧು ಸಾಲಿಯಾನ್, ನಿವೃತ್ತ ಬಿಇಒ ವಿಠಲ್‌ದಾಸ್ ಬನ್ನಂಜೆ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಥಮ ಅಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ, ಆಶಾನಿಲಯ ವಿಶೇಷ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಶಶಿಕಲಾ ಬೆಂಜಮಿನ್ ಕೋಟ್ಯಾನ್, ಆಯಿಶಾ ಕಾರ್ಕಳ ಹಾಗೂ ಲಕ್ಷ್ಮೀಬಾಯಿ ಪೂಜಾರಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ADVERTISEMENT

ಸಮಾರಂಭವನ್ನು ಪದ್ಮಶ್ರೀ ಹರೇಕಳ ಹಾಜಬ್ಬ ಉದ್ಘಾಟಿಸಲಿದ್ದು, ಅಬ್ದುಸ್ಸಲಾಮ್ ಪುತ್ತಿಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಚಂದ್ರ ಪೂಜಾರಿ ಭಾಷಣ ಮಾಡಲಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜು ಪೂಜಾರಿ ಬೈಂದೂರು ಹಾಗೂ ಸಹಬಾಳ್ವೆ ಉಡುಪಿಯ ಅಧ್ಯಕ್ಷ ಅಮೃತ ಶೆಣೈ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೌಲಾ, ಕೋಶಾಧಿಕಾರಿ ಇಕ್ಬಾಲ್‌ ಕಟಪಾಡಿ, ಸಂಚಾಲಕ ಉಮರ್‌, ಪತ್ರಿಕಾ ಕಾರ್ಯದರ್ಶಿ ಸಲಾಹುದ್ದೀನ್ ಅಬ್ದುಲ್ಲ, ಇದ್ರೀಸ್ ಹೂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.