ಹೆಬ್ರಿ: ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ (ಎನ್ಎಸ್‌ಡಿ) ವಿದ್ಯಾರ್ಥಿಗಳು ಪಶ್ಚಿಮ ಘಟ್ಟದ ತಪ್ಪಲಿನ ತಿಂಗಳೆ ಗರಡಿ ಆವರಣದಲ್ಲಿ ತಿಂಗಳೆ ಪ್ರತಿಷ್ಠಾನದ ವತಿಯಿಂದ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಂದ 10 ದಿನದಲ್ಲಿ ಯಕ್ಷಗಾನ ಕಲಿತರು.
ದೆಹಲಿ ಎನ್ಎಸ್‍ಡಿ ಅಲ್ಲದೆ, ವಿವಿಧ ರಾಜ್ಯಗಳ ನಾಟಕ ಶಾಲೆಯ 30 ವಿದ್ಯಾರ್ಥಿಗಳ ತಂಡ ಯಕ್ಷಗಾನ ಕಲಿಕೆಗೆ ಗುರುಗಳನ್ನು ಅರಸಿಕೊಂಡು ಉಡುಪಿಗೆ ಬಂದಿತ್ತು. ವೇಷಭೂಷಣ, ಮಾತುಗಾರಿಕೆ, ಹಾಡುಗಾರಿಕೆ, ನಟನೆ, ಹಿನ್ನೆಲೆ ಸಂಗೀತ, ನೃತ್ಯ ಹೀಗೆ ಯಕ್ಷಗಾನದ ಸಮಗ್ರತೆಗೆ ವಿದ್ಯಾರ್ಥಿಗಳು ಮಾರುಹೋಗಿದ್ದಾರೆ.
ಮುಂದೆ 20 ದಿನಗಳ ಯಕ್ಷಗಾನ ತರಬೇತಿ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಲಿದೆ. ಬನ್ನಂಜೆ ಸಂಜೀವ ಸುವರ್ಣರೇ ಹೆಜ್ಜೆ ಜೊತೆ ಪ್ರಸಂಗದ ಪಾಠ ಮಾಡಲಿದ್ದಾರೆ. ಕುಣಿತದಲ್ಲಿ ಅವರ ಶಿಷ್ಯರಾದ ಸುಮಂತ್, ಶಿಶಿರ್ ಸುವರ್ಣ, ಮನೋಜ್ ಸಹಕರಿಸುತ್ತಾರೆ. ಲಂಬೋದರ ಹೆಗಡೆ, ಶ್ರೀಧರ ಹೆಗಡೆ ಹಿಮ್ಮೇಳದಲ್ಲಿ ಸಾಥ್ ನೀಡುತ್ತಿದ್ದಾರೆ.
ಈ ಬಾರಿ ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ವಿಕ್ರಮಾರ್ಜುನ ಹೆಗ್ಗಡೆ ಅವರ ನೇತೃತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು. 10 ದಿನಗಳ ಶಿಬಿರದಲ್ಲಿ ಪ್ರತಿಷ್ಠಾನದ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.