ADVERTISEMENT

ಕಲೆ, ಸಾಹಿತ್ಯದಿಂದ ಹೃದಯವಂತಿಕೆ: ಸುಜಯೀಂದ್ರ ಹಂದೆ

ಆನ್‌ಲೈನ್ ಯಕ್ಷಗಾನ ತರಬೇತಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 3:14 IST
Last Updated 22 ಜೂನ್ 2021, 3:14 IST
ಯಕ್ಷಗುರು ಪ್ರಿಯಾಂಕ ಕೆ.ಮೋಹನ್ ನಡೆಸುವ ಯಕ್ಷಗಾನ ತರಬೇತಿಯನ್ನು ಯಕ್ಷಗಾನ ವಿದ್ವಾಂಸ ಸುಜಯೀಂದ್ರ ಹಂದೆ ಉದ್ಘಾಟಿಸಿದರು.
ಯಕ್ಷಗುರು ಪ್ರಿಯಾಂಕ ಕೆ.ಮೋಹನ್ ನಡೆಸುವ ಯಕ್ಷಗಾನ ತರಬೇತಿಯನ್ನು ಯಕ್ಷಗಾನ ವಿದ್ವಾಂಸ ಸುಜಯೀಂದ್ರ ಹಂದೆ ಉದ್ಘಾಟಿಸಿದರು.   

ಬ್ರಹ್ಮಾವರ: ‘ಮನುಷ್ಯ ಕೇವಲ ಬುದ್ಧಿಜೀವಿಯಾದರೆ ಸಾಲದು, ಭಾವಜೀವಿಯೂ ಆಗಬೇಕು. ಶಾಲಾ- ಕಾಲೇಜುಗಳು ನಮ್ಮನ್ನು ಬುದ್ಧಿವಂತರನ್ನಾಗಿಸಿದರೆ, ಕಲೆ ಸಾಹಿತ್ಯವು ನಮ್ಮನ್ನು ಹೃದಯವಂತರನ್ನಾಗಿ ಮಾಡುತ್ತದೆ’ ಎಂದು ಯಕ್ಷಗಾನ ವಿದ್ವಾಂಸ ಮತ್ತು ಉಪನ್ಯಾಸಕ ಸುಜಯೀಂದ್ರ ಹಂದೆ ಹೇಳಿದರು.

ಬೆಂಗಳೂರಿನ ಯಕ್ಷದೇಗುಲ ಸಂಯೋಜನೆಯಲ್ಲಿ ವಿಸ್ತಾರ್ ಚಿತ್ರದುರ್ಗ ಮತ್ತು ವಿಮುಕ್ತಿ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ಅಲೆಮಾರಿ ಮತ್ತು ಅರೆ ಅಲೆಮಾರಿ ಮಕ್ಕಳಿಗೆ ಯಕ್ಷಗುರು ಪ್ರಿಯಾಂಕ ಕೆ. ಮೋಹನ್ ಅವರು ನಡೆಸುವ ಆನ್‌ಲೈನ್ ಯಕ್ಷಗಾನ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಚಿತ್ರ, ಶಿಲ್ಪ, ಸಂಗೀತ, ನೃತ್ಯ ಹಾಗೂ ಸಾಹಿತ್ಯವನ್ನು ಒಳಗೊಂಡ ಸಮಷ್ಠಿ ಕಲೆಯಾದ ಯಕ್ಷಗಾನವನ್ನು ಆಸ್ವಾದಿಸುವುದರಿಂದ ಬುದ್ಧಿ, ಭಾವಗಳೆರಡೂ ಸಿದ್ಧಿಸುತ್ತವೆ. ಯಕ್ಷಗಾನವು ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಗುರುತಿಸಿಕೊಳ್ಳುವ ನೆಲೆಯಲ್ಲಿ ಅಧ್ಯಯನ ಮತ್ತು ಪ್ರದರ್ಶನಗಳು ಶಾಸ್ತ್ರೀಯ ರಂಗದ ಶಿಸ್ತಿಗೆ ಒಳಗಾಗಬೇಕಿದೆ. ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನವನ್ನು ನೋಡಿದ ಕಣ್ಣುಗಳೇ ನೋಡುವುದಕ್ಕಿಂತ ಹೊಸ ಪ್ರೇಕ್ಷಕರನ್ನು ಮುಟ್ಟಬೇಕಾದ ಅನಿವಾರ್ಯತೆಯಿದೆ. ಆ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷದೇಗುಲದ ಪ್ರಿಯಾಂಕ ಕೆ.ಮೋಹನ್ ಆಯೋಜಿಸುತ್ತಿರುವ ಯಕ್ಷ ಕಲಿಕಾ ಶಿಬಿರ ಅಭಿನಂದನೀಯ’ ಎಂದರು.

ADVERTISEMENT

ಯಕ್ಷದೇಗುಲದ ಕೋಟ ಸುದರ್ಶನ ಉರಾಳ, ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ, ಸಂಪನ್ಮೂಲ ವ್ಯಕ್ತಿ ಸುದೀಪ ಉರಾಳ, ಭಾಗವತ ಲಂಬೋದರ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.