ADVERTISEMENT

ರಾಜಕೀಯ ಕಾರಣಕ್ಕೆ ಪಠ್ಯ ಪರಿಷ್ಕರಣೆ ವಿರೋಧ: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 13:41 IST
Last Updated 22 ಜೂನ್ 2022, 13:41 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಸಹಿಷ್ಣುತೆಯ ವಿಚಾರವನ್ನು ಮುಂದಿಟ್ಟುಕೊಂಡು ಕೆಲವರು ಪ್ರಶಸ್ತಿ ವಾಪಾಸ್ ಮಾಡುವುದಾಗಿ ಹೇಳಿದರು. ಆದರೆ, ಪ್ರಶಸ್ತಿ ವಾಪಾಸ್ ಕೊಡಲಿಲ್ಲ ಆದರೆ, ವಾಪಾಸ್‌ ಕೊಡುತ್ತೇವೆ ಎಂಬ ಹೇಳಿಕೆಯೇ ರಾಜ್ಯದಾದ್ಯಂತ ಸುದ್ದಿಯಾಯಿತು. ಪಠ್ಯ ವಾಪಾಸ್‌ ಅಭಿಯಾನವೂ ಅದೇ ಮಾದರಿಯಲ್ಲಿ ನಡೆಯುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿರೋಧ ಪಕ್ಷದ ನಾಯಕನಾಗಿದ್ದಾಗ ‘ಅಸಹಿಷ್ಣುತೆಯ ಕಾರಣ ನೀಡಿ ಎಷ್ಟು ಮಂದಿ ಪ್ರಶಸ್ತಿ ವಾಪಾಸ್ ಮಾಡಿದ್ದಾರೆ, ಫಲಕಗಳನ್ನು ಹಿಂದಿರುಗಿಸಿದ್ದಾರೆಯೇ, ಪ್ರಶಸ್ತಿಯ ಮೂಲ ಪ್ರಮಾಣಪತ್ರ ಹಾಗೂ ಪ್ರಶಸ್ತಿಯ ಮೊತ್ತವನ್ನು ವಾಪಸ್ ಮಾಡಿದ್ದಾರೆಯೇ ಎಂಬ ಮಾಹಿತಿಯನ್ನು ಸದನದಲ್ಲಿ ಕೇಳಲಾಗಿತ್ತು’.

ಇದಕ್ಕೆ ಪ್ರತಿಯಾಗಿ ಯಾರೂ ಪ್ರಶಸ್ತಿಯನ್ನು ವಾಪಾಸ್ ಮಾಡಿಲ್ಲ. ಕೇವಲ ಪ್ರಶಸ್ತಿಯ ನಕಲು ಪ್ರತಿಯನ್ನು ಮಾತ್ರ ಮರಳಿಸಿದ್ದಾರೆ ಎಂಬ ಉತ್ತರ ದೊರೆಯಿತು. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿಯೂ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿರುವ ಕೆಲವರು ಸರ್ಕಾರವನ್ನು ಟೀಕಿಸುವ ಭರದಲ್ಲಿ ಪಠ್ಯಪುಸ್ತಕದಿಂದ ಪಠ್ಯವನ್ನು ತೆಗೆಯುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಕೋಟ ಹೇಳಿದರು.

ADVERTISEMENT

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಾರ್ವಜನಿಕರಿಂದ ವಿರೋಧವಿಲ್ಲ. ರಾಜಕೀಯ ವಿರೋಧವಷ್ಟೆ ವ್ಯಕ್ತವಾಗಿದೆ. ಪಠ್ಯವೂ ಚೆನ್ನಾಗಿದೆ, ಶಿಕ್ಷಣವೂ ಚೆನ್ನಾಗಿದೆ. ಪಠ್ಯ ಪರಿಷ್ಕರಣೆ ವಿಚಾರವಾಗಿ ಎದ್ದಿರುವ ಗೊಂದಲಗಳನ್ನು ನಿವಾರಿಸಲು ಎಲ್ಲ ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.

ಪ್ರಣಾವಾನಂದ ಶ್ರೀಗಳಿಗೆ ಮನವರಿಕೆ: ನಾರಾಯಣ ಗುರುಗಳ ನಿಗಮ ಸ್ಥಾಪಿಸುವಂತೆ ಹಾಗೂ ರಾಜ್ಯದಾದ್ಯಂತ ಶೇಂದಿ ಇಳಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಪ್ರಣಾವಾನಂದ ಶ್ರೀಗಳು ಹೋರಾಟಕ್ಕೆ ಮುಂದಾಗಿದ್ದಾರೆ. ಎಲ್ಲ ಸಮುದಾಯಗಳಿಗೂ ಪ್ರತ್ಯೇಕ ನಿಗಮ ರಚನೆ ಮಾಡುವುದು ಕಷ್ಟ ಎಂದು ಮುಖ್ಯಮಂತ್ರಿ ತಿಳಿಸಿದ್ದು, ಮುಂದೆ, ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈಗಾಗಲೇ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿರುವ ₹ 400 ಕೋಟಿ ಅನುದಾನವನ್ನು ಬಿಲ್ಲವರು, ಈಡಿಗರು ನಾಮಧಾರಿಗಳು ಸೇರಿದಂತೆ ಇತರ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ. ಶೇಂದಿ ನಿಷೇಧ ಇರುವ ಜಿಲ್ಲೆಗಳಲ್ಲಿ ಮೂಲ ಕಸುಬು ಕಳೆದುಕೊಂಡಿರುವವರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಚಿಂತನೆ ಇದೆ ಎಂದು ತಿಳಿಸಿದರು.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಶೇಂದಿ ಮಾರಾಟ ನಿಷೇಧವಾಗಿ ಮೂರು ದಶಕಗಳು ಕಳೆದಿವೆ. ಈಗ ಮತ್ತೆ ಶೇಂದಿ ಮಾರಾಟಕ್ಕೆ ಅನುಮತಿ ನೀಡಿದರೆ ಮೂರ್ತೆದಾರರ ಸಮುದಾಯ ಮತ್ತಷ್ಟು ಹಿಂದಕ್ಕೆ ಹೋಗುವ ಆತಂಕಗಳು ಕಾಡುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳ ಜತೆ ಜೂನ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳು ಚರ್ಚೆ ನಡೆಸಲಿದ್ದಾರೆ ಎಂದು ಕೋಟ ತಿಳಿಸಿದರು.

ನಾರಾಯಣ ಗುರುಗಳ ಹುಟ್ಟೂರು ಕೇರಳದ ಶಿವಗಿರಿ ಮಠವನ್ನು ₹ 70 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕೇಂದ್ರ ಸರ್ಕಾರ, ಜಗತ್ತಿಗೆ ನಾರಾಯಣ ಗುರುಗಳ ಸಂದೇಶ ಸಾರುತ್ತಿದೆ. ರಾಜ್ಯ ಸರ್ಕಾರ ಕೂಡ ತಲಾ ₹ 25 ಕೋಟಿ ವೆಚ್ಚದಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ನಾರಾಯಣ ಗುರುಗಳ ವಸತಿ ಶಾಲೆ ನಿರ್ಮಾಣ ಮಾಡುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.