ಪಡುಬಿದ್ರಿ: ಇಲ್ಲಿನ ಮಧ್ವನಗರ ತರಂಗಿಣಿ ಮಿತ್ರ ಮಂಡಳಿ ವತಿಯಿಂದ ಮಧ್ವನಗರದಲ್ಲಿ ವಿದ್ಯಾನಿಧಿ, ಪ್ರತಿಭಾ ಪುರಸ್ಕಾರ, ಆರೋಗ್ಯ ನಿಧಿ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.
ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ ಮಾತನಾಡಿ, ವೇದದ ಆಜ್ಞೆಯಂತೆ ಬ್ರಾಹ್ಮಣ ಸಮಾಜ ಸಂಧ್ಯಾವಂದನೆ, ನಿತ್ಯಾನುಷ್ಠಾನ ಮರೆಯಬಾರದು. ನಾವು ಕಲಿಯಬೇಕಾದದ್ದು ತುಂಬಾ ಇದ್ದು, ದೇವರಲ್ಲಿ ಒಳ್ಳೆಯ ಜ್ಞಾನ ಕೊಡುವಂತೆ ಪ್ರಾರ್ಥಿಸಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಸರ್ವಜ್ಞ ಆಚಾರ್ ಮಾತನಾಡಿ, ಅನ್ನದಾನ ಮಹಾದಾನ. ವಿದ್ಯಾದಾನ ಮಹತ್ತರವಾದುದು. ಅನ್ನದಿಂದ ಕ್ಷಣಿಕ ಹಸಿವು ನೀಗಬಹುದು, ವಿದ್ಯೆಯಿಂದ ಜೀವಮಾನವಿಡೀ ತನ್ನನ್ನು, ಕುಟುಂಬವನ್ನು ಪೋಷಿಸಿಕೊಂಡು ಬರಬಹುದು. ಜೀವನಕ್ಕೆ ಬೇಕಾದ ವಿದ್ಯೆಯನ್ನು ಕಲಿಯಿರಿ ಎಂದರು.
ಧಾರ್ಮಿಕ ಮುಖಂಡ ತೋಕೂರು ಸುಬ್ರಹ್ಮಣ್ಯ ಭಟ್ ಮಾತನಾಡಿದರು. ಸಾಧಕರಾದ ಎಂ. ಸಮೀರ ಆಚಾರ್ಯ ಉಡುಪಿ, ವಿನಯ ಕುಮಾರ್ ರಾವ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ, ಅನಾರೋಗ್ಯ ಪೀಡಿತರಿಗೆ ಆರೋಗ್ಯ ನಿಧಿ ವಿತರಿಸಲಾಯಿತು.
ತರಂಗಿಣಿ ಮಿತ್ರ ಮಂಡಳಿ ಗೌರವಾಧ್ಯಕ್ಷ ಪಿ. ಸದಾಶಿವ ಆಚಾರ್, ಖಜಾಂಚಿ ಗೋವಿಂದ ರಾವ್ ಭಾಗವಹಿಸಿದ್ದರು. ತರಂಗಿಣಿ ಮಿತ್ರ ಮಂಡಳಿ ಅಧ್ಯಕ್ಷ ಪಿ. ರಮಾಕಾಂತ್ ರಾವ್ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಚಂದ್ರಶೇಖರ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ್ ರಾವ್, ಸುರೇಶ್ ರಾವ್ ಆಚಾರ್ ಸಾಧಕರನ್ನು ಪರಿಚಯಿಸಿದರು. ಸುದರ್ಶನ್ ಆಚಾರ್ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಗಣೇಶ ರಾವ್ ವೈ.ಎಸ್. ವಂದಿಸಿದರು. ಶ್ರೀಧರ್ ಆಚಾರ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.