ADVERTISEMENT

ಕಳಪೆ ಆಹಾರ | ತನಿಖೆಗೆ ಆಗ್ರಹ: ‘ಪ್ರಜಾವಾಣಿ’ ವರದಿ ಉಲ್ಲೇಖಿಸಿ ಸಿಎಂಗೆ ಪತ್ರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ರಾಜ್ಯದ ಬುಡಕಟ್ಟು ಸಮುದಾಯಕ್ಕೆ ನೀಡುತ್ತಿರುವ ಕಳಪೆ ಪೌಷ್ಟಿಕ ಆಹಾರದ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಲೋಕಾಯುಕ್ತ ತನಿಖೆಗೆ ಒತ್ತಾಯಿಸಿದ್ದಾರೆ.

‘ರಾಜ್ಯ ಸರ್ಕಾರ ₹ 120 ಕೋಟಿ ವೆಚ್ಚದಲ್ಲಿ ರಾಜ್ಯದ ಬುಡಕಟ್ಟು ಸಮುದಾಯಕ್ಕೆ ನೀಡುತ್ತಿರುವ ಪೌಷ್ಟಿಕ ಆಹಾರದ ಅನಾಹುತದ ಬಗ್ಗೆ ಅ. 26ರಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮುಖಪುಟದ ವರದಿ ಲಗತ್ತಿಸಿ, ಈ ಬಗ್ಗೆ ಕನಿಷ್ಠ ಲೋಕಾಯುಕ್ತ ತನಿಖೆಗಾದರೂ ಆದೇಶ ನೀಡಲು ವಿನಂತಿಸಿ ಈ ಪತ್ರ ಬರೆಯುತ್ತಿದ್ದೇನೆ’ ಎಂದು ಕೋಟ ಅವರು ಪತ್ರದಲ್ಲಿ ಹೇಳಿದ್ದಾರೆ.

‘ರಾಜ್ಯದಲ್ಲಿ ಸರಿ ಸುಮಾರು 48,000 ಬುಡಕಟ್ಟು ಸಮುದಾಯದ ಕುಟುಂಬಗಳಿವೆ. ಈ ಪೈಕಿ 2,48,000 ಫಲಾನುಭವಿಗಳಿಗೆ ಸರ್ಕಾರ ಪೌಷ್ಟಿಕ ಆಹಾರ ನೀಡುತ್ತಿದೆ. ಆದಿವಾಸಿಗಳೆಂದು ಪರಿಗಣಿಸಿರುವ ಕೊರಗರು, ಮಲೆ ಕುಡಿಯರು, ಸೋಲಿಗರು, ಹಲಸರು, ಹಕ್ಕಿಪಿಕ್ಕಿಯವರು, ಗೊಂಡ, ಮೇದ, ಬೆಟ್ಟ ಕುರುಬರು ಸೇರಿದಂತೆ ಅನೇಕ ಬುಡಕಟ್ಟು ಸಮುದಾಯದ ಜನರು ತಮ್ಮ ಸರ್ಕಾರದ ಈ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತಾರೆ. ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುವ ಕಡುಬಡವರಿಗೆ ನೀಡುವ ಗುಣಮಟ್ಟದ ಆಹಾರದ ಕಿಟ್ ವಿತರಣೆಯಲ್ಲಿ ಊಹಿಸಲಾಗದ ಕಳಪೆ ಮಟ್ಟದ ಆಹಾರ ಸರಬರಾಜಾಗುತ್ತಿರುವ ಬಗ್ಗೆ ‘ಪ್ರಜಾವಾಣಿ’ ಫೋಟೊ ಸಹಿತ ಮುಖಪುಟದಲ್ಲಿ ಸುದ್ದಿ ಮಾಡಿದೆ’ ಎಂದಿದ್ದಾರೆ.

ADVERTISEMENT

‘ಚಾಮರಾಜನಗರದಲ್ಲಿ ಸುಮಾರು 77 ಮಂದಿಗೆ ಸಾಂಕ್ರಾಮಿಕ ಕಾಯಿಲೆ ಬಂದಿದೆ ಎಂದು ಈ ನತದೃಷ್ಟರು ಹೇಳಿದ ಮಾಹಿತಿ ಲಭ್ಯವಾಗುತ್ತಿದೆ. ರಾಜ್ಯಮಟ್ಟದ ಅಧಿಕಾರಿಗಳು ನಮ್ಮ ದೂರಿಗೆ ಸ್ಪಂದಿಸುತ್ತಿಲ್ಲ, ಗುತ್ತಿಗೆದಾರರು ಒಳಗುತ್ತಿಗೆ ಕೊಟ್ಟು ಸಮಸ್ಯೆ ಸೃಷ್ಟಿಯಾಗಿದೆ ಎಂದ ಆದಿವಾಸಿಗಳು ಕೆಲವು ಕಡೆಗಳಲ್ಲಿ ದವಸಧಾನ್ಯಗಳು ಕಾಳಸಂತೆ ಮಾರಾಟವಾಗುತ್ತಿವೆ ಎನ್ನುತ್ತಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಇಲಾಖಾಧಿಕಾರಿಗಳು ದೂರು ಬಂದರೆ ಪರಿಶೀಲಿಸುತ್ತೇವೆ ಎಂದು ಹೇಳಿಕೆ ಕೊಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಬುಡಕಟ್ಟು ಜನಾಂಗಕ್ಕೆ ಕೊಡುವ ಆಹಾರ ಆಡಳಿತಾತ್ಮಕ ಕಾರಣಗಳಿಗಾಗಿ ಈ ಪ್ರಮಾಣದಲ್ಲಿ ಕಳಪೆ ಎಂದು ದೂರು ಬಂದಾಗಲೂ ಸರ್ಕಾರ ನಿರ್ಲಿಪ್ತವಾಗಿರುವುದು ಶೋಭೆಯಲ್ಲ. ತಕ್ಷಣ ಪ್ರಕರಣವನ್ನು ಲೋಕಾಯುಕ್ತರಿಂದಾದರೂ ತನಿಖೆ ಮಾಡಬೇಕೆಂದು’ ಎಂದು ಅವರು ಮುಖ್ಯ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ನಿಬಂಧನೆಗಳನ್ನು ಗಾಳಿಗೆ ತೂರಲಾಗಿದೆ’

‘ರಾಜ್ಯದ ಎಂಟು ಜಿಲ್ಲೆಗಳಲ್ಲಿ ನೆಲೆಸಿರುವ ಆದಿವಾಸಿ ಗಿರಿಜನರಿಗೆ ಆಹಾರ ವಿತರಿಸುವ ಮೊದಲು ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಗುಣಮಟ್ಟ ಪರಿಶೀಲಿಸುವ ನಿಯಮ ಇದೆಯಂತೆ. ಆಹಾರದ ಕಿಟ್‌ಗಳಲ್ಲಿ ಬಳಕೆಯ ಅವಧಿಯೂ ಸೇರಿದಂತೆ ಎಲ್ಲ ನಿಬಂಧನೆಗಳನ್ನು ಗಾಳಿಗೆ ತೂರಲಾಗಿದೆ ಎಂದು ವರದಿ ಹೇಳಿದೆ’ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ನಮಗೆ ಸರ್ಕಾರ ಒದಗಿಸಿದ ಬೇಳೆ ಅರ್ಧ ಬೇಯುತ್ತದೆ ಎಣ್ಣೆ ದುರ್ವಾಸನೆಯಿಂದ ಕೂಡಿದೆ ಕಾಳುಗಳು ಹುಳು ಬಿದ್ದಿವೆ ಮೊಟ್ಟೆ ಕೊಳೆತು ಹೋಗಿವೆ ಬೆಲ್ಲ ಕರಗಿ ನೀರಾಗಿದೆ ಎಂದು ನೊಂದ ಫಲಾನುಭವಿಗಳು ನುಡಿಯುತ್ತಾರೆ.  ಕೆಟ್ಟ ಪದಾರ್ಥಗಳನ್ನು ಪಡೆದ ಬಡವರು ದೂರು ಕೊಟ್ಟರೆ ತನಿಖೆ ಮಾಡಿ ಉತ್ತಮ ಗುಣಮಟ್ಟದ್ದು ಎಂದು ಸರ್ಟಿಫಿಕೇಟ್ ನೀಡಲಾಗಿದೆಯಂತೆ. ಮುಗ್ಗಲು ಹಿಡಿದ ಬೇಳೆಕಾಳುಗಳನ್ನು ನಮಗೆ ನೀಡಿ ವಂಚಿಸಲಾಗಿದೆ ಎಂದು ದೂರು ನೀಡಿದರೆ ಕೇಳುವವರಿಲ್ಲ’ ಎಂದು ಗಿರಿಜನರು ದೂರಿರುವುದಾಗಿ ಅವರು ಪತ್ರದಲ್ಲಿ ಹೇಳಿದ್ದಾರೆ.

ಬುಡಕಟ್ಟು ಜನಾಂಗಕ್ಕೆ ಕೊಡುವ ಆಹಾರ ಆಡಳಿತಾತ್ಮಕ ಕಾರಣಕ್ಕೆ ಕಳಪೆ ಎಂದು ದೂರು ಬಂದಾಗಲೂ ಸರ್ಕಾರ ನಿರ್ಲಿಪ್ತವಾಗಿರುವುದು ಶೋಭೆಯಲ್ಲ.
–ಕೋಟ ಶ್ರೀನಿವಾಸ ಪೂಜಾರಿ, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.