ADVERTISEMENT

ಉಡುಪಿ: ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ಸಲ್ಲದು

ಕಾರ್ಮಿಕ ಸಂಘಗಳ ಜಂಟಿ ಸಮಿತಿ ನೇತೃತ್ವದಲ್ಲಿ ಮೊಂಬತ್ತಿ ಹಚ್ಚಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 17:17 IST
Last Updated 9 ಮಾರ್ಚ್ 2021, 17:17 IST
ಸಾರ್ವಜನಿಕ ರಂಗದ ಬ್ಯಾಂಕ್ ಹಾಗೂ ವಿಮಾ ಕ್ಷೇತ್ರ ಖಾಸಗೀಕರಣದ ವಿರುದ್ಧ ಸೋಮವಾರ ಸಂಜೆ ಕಾರ್ಮಿಕ ಸಂಘಗಳ ಜಂಟಿ ಸಮಿತಿ ನೇತೃತ್ವದಲ್ಲಿ ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.
ಸಾರ್ವಜನಿಕ ರಂಗದ ಬ್ಯಾಂಕ್ ಹಾಗೂ ವಿಮಾ ಕ್ಷೇತ್ರ ಖಾಸಗೀಕರಣದ ವಿರುದ್ಧ ಸೋಮವಾರ ಸಂಜೆ ಕಾರ್ಮಿಕ ಸಂಘಗಳ ಜಂಟಿ ಸಮಿತಿ ನೇತೃತ್ವದಲ್ಲಿ ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.   

ಉಡುಪಿ: ಸಾರ್ವಜನಿಕ ರಂಗದ ಬ್ಯಾಂಕ್ ಹಾಗೂ ವಿಮಾ ಕ್ಷೇತ್ರ ಖಾಸಗೀಕರಣದ ವಿರುದ್ಧ ಸೋಮವಾರ ಕಾರ್ಮಿಕ ಸಂಘಗಳ ಜಂಟಿ ಸಮಿತಿ ನೇತೃತ್ವದಲ್ಲಿ ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.

ಹಿರಿಯ ಕಾರ್ಮಿಕ ಮುಖಂಡ ಪಿ.ವಿಶ್ವನಾಥ ರೈ ಮಾತನಾಡಿ, ‘ಬ್ಯಾಂಕ್, ವಿಮಾ ಸಂಸ್ಥೆಗಳು ಹಾಗೂ ಸಾರ್ವಜನಿಕ ರಂಗದ ಕಂಪನಿಗಳನ್ನು ದೇಶದ ಜನರ ಅಭಿವೃದ್ಧಿಗೆ ಉಳಿಸಿಕೊಳ್ಳಬೇಕು, ಸಂರಕ್ಷಿಸಬೇಕು. ಆದರೆ, ಅಧಿಕಾರದಲ್ಲಿರುವ ಸರ್ಕಾರ ಎಲ್ಲ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುತ್ತಿದೆ. ಜನರ ಆಶಯ, ನಿರೀಕ್ಷೆಗಳನ್ನು ತುಳಿಯುತ್ತಿದೆ. ಜನರ ಅಭಿಪ್ರಾಯ, ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಐಟಿಯುನ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ಬ್ಯಾಂಕುಗಳ ವಿಲೀನವು ಮುಂದೆ ಖಾಸಗೀಕರಣಕ್ಕೆ ದಾರಿಯಾಗಲಿದೆ. ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ಮತ್ತೆ ಎರಡು ಬ್ಯಾಂಕ್‌ಗಳು ಹಾಗೂ ಒಂದು ವಿಮಾ ಕಂಪನಿ ಮಾರಾಟ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳವನ್ನು ಶೇ 46 ರಿಂದ 74ಕ್ಕೆ ಹೆಚ್ಚಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಇದು ಬಂಡವಾಶ ಶಾಯಿಗಳ ಪರವಾದ ನಿಲುವು ಎಂದು ಟೀಕಿಸಿದರು.

ADVERTISEMENT

ಕೇವಲ ಐದು ಕೋಟಿ ಬಂಡವಾಳದಲ್ಲಿ ಆರಂಭವಾದ ಎಲ್‌ಐಸಿ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ರಸ್ತೆ, ನೀರಾವರಿ, ವಿದ್ಯುತ್ ಉತ್ಪಾದನೆ, ಸೇತುವೆ ನಿರ್ಮಾಣಕ್ಕೆ ಜನರಿಂದ ಕ್ರೋಢೀಕರಿಸಿದ ಹಣ ತೊಡಗಿಸಿದೆ. ಸಂಸ್ಥೆಗೆ ವಿದೇಶಿ ನೇರ ಬಂಡವಾಳದ ಅಗತ್ಯವಿಲ್ಲ. ದೊಡ್ಡ ಬಂಡವಾಳಗಾರರಿಗೆ ಸಂಸ್ಥೆಯ ಒಡೆತನವನ್ನು ಧಾರೆಯೆರೆಯಲು ಸರ್ಕಾರ ಷಡ್ಯಂತ್ರ ನಡೆಸಿದೆ ಎಂದು ದೂರಿದರು.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಕೆ. ರಮೇಶ್ ಮಾತನಾಡಿ, ‘ಬ್ಯಾಂಕಿಂಗ್ ಸೇವೆಯು ರಾಷ್ಟ್ರೀಕರಣದ ಮೊದಲು ಉಳ್ಳವರ ಪಾಲಾಗಿತ್ತು. ಈಗ ಜನಸಾಮಾನ್ಯರಿಗೂ ದಕ್ಕುತ್ತಿದೆ. ದೊಡ್ಡ ಉದ್ಯಮಿಗಳ 6,27,243 ಕೋಟಿ ಸಾಲ ಮನ್ನಾ ಮಾಡಿರುವ ಸರ್ಕಾರ ಈಗ ಅವರಿಗೇ ಬ್ಯಾಂಕುಗಳ ಒಡೆತನ ಹಸ್ತಾಂತರಿಸುತ್ತಿದೆ. ಇದರಿಂದ ಸಾರ್ವಜನಿಕರ ಉಳಿತಾಯಕ್ಕೆ ಅಪಾಯವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಬ್ಯಾಂಕ್ ನೌಕರರ ಫೆಡರೇಶನ್‌ ನಾಯಕ ರವೀಂದ್ರ ಮಾತನಾಡಿ, ‘ಬ್ಯಾಂಕ್ ಮತ್ತು ವಿಮಾ ಸಂಸ್ಥೆಗಳ ಖಾಸಗೀಕರಣವನ್ನು ಎಲ್ಲರೂ ವಿರೋಧಿಸಬೇಕು. ಎಲ್‌ಐಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದು, ಖಾಸಗೀಕರಣಕ್ಕೆ ಅವಕಾಶ ನೀಡಬಾರದು ಎಂದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸಂಚಾಲಕ ಕೆ. ಶಂಕರ್ ಮಾತನಾಡಿ ‘ಎಲ್‌ಐಸಿ ಮತ್ತು ಬ್ಯಾಂಕುಗಳ ಖಾಸಗೀಕರಣವಾದರೆ ದೇಶ ಆರ್ಥಿಕ ಪರಿಸ್ಥಿತಿ ಕುಸಿಯಲಿದೆ ಎಂದು ಎಚ್ಚರಿಸಿದರು.

ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್ ಮಾತನಾಡಿದರು. ವಿಮಾ ನೌಕರರ ಸಂಘದ ಉಪಾಧ್ಯಕ್ಷ ಡೆರಿಕ್ ರೆಬೆಲ್ಲೊ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.