ADVERTISEMENT

ಧರೆಗುರುಳಿದ 273 ವಿದ್ಯುತ್ ಕಂಬ; 4 ಟ್ರಾನ್ಸ್‌ಫರಂ ಹಾನಿ

ಮಳೆ ಇಳಿಮುಖವಾದರೂ ಕಾಡುತ್ತಿದೆ ಆತಂಕ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 15:05 IST
Last Updated 7 ಆಗಸ್ಟ್ 2019, 15:05 IST
ಅಲೆವೂರು, ಮುಚ್ಲಕೋಡು ಬಾಗದಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ಬಿದ್ದಿರುವುದು.
ಅಲೆವೂರು, ಮುಚ್ಲಕೋಡು ಬಾಗದಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ಬಿದ್ದಿರುವುದು.   

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ಅಬ್ಬರಿಸಿದ್ದ ಮಳೆ ಬುಧವಾರ ಕೊಂಚ ಇಳಿಮುಖವಾಗಿತ್ತು. ಬಿರುಸಾಗಿ ಮಳೆ ಸುರಿಯದಿದ್ದರೂ ಗಾಳಿಯ ಅಬ್ಬರ ಜೋರಾಗಿತ್ತು. ದಿನವಿಡೀ ಜಿಟಿ–ಜಿಟಿ ಮಳೆ ಸುರಿಯುತ್ತಿತ್ತು.

ಭಾರಿ ಹಾನಿ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದ್ದು, ನೂರಾರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸೂರು ಕಳೆದುಕೊಂಡು ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿಭೂಮಿಗೆ ನೀರು ನುಗ್ಗಿದ್ದು ಬೆಳೆಗಳು ನಾಶವಾಗಿವೆ. ಅಡಿಕೆ ಹಾಗೂ ಬಾಳೆಯ ತೋಟಗಳಿಗೆ ಹಾನಿಯಾಗಿದ್ದು, ಮರಗಳು ಮುರಿದು ಬಿದ್ದಿವೆ.

ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಸರಾಸರಿ 127.60 ಮಿ.ಮೀ ಮಳೆಯಾಗಿದೆ. ಉಡುಪಿಯಲ್ಲಿ 97.4, ಕುಂದಾಪುರದಲ್ಲಿ 156.3, ಕಾರ್ಕಳದಲ್ಲಿ 112.3 ಮಿ.ಮೀ ಮಳೆಯಾಗಿದೆ.

ADVERTISEMENT

ಕಾರ್ಕಳ ತಾಲ್ಲೂಕಿನ ಕೌಡೂರು, ದುರ್ಗ, ಕಸಬಾ,ಮರ್ಣೆ, ಮಾಳ, ಕುಕ್ಕುಂದೂರು, ಬೋಳ,ಎರ್ಲಪಾಡಿ, ಸೂಡ, ಇನ್ನಾ, ಪಳ್ಳಿ, ಹಿರ್ಗಾನ, ಮುಡಾರು, ಮಿಯಾರು, ಕಸಬಾ ಗ್ರಾಮ, ಪೆರ್ವಾಜೆ, ಈದು, ನೀರೆ,ನಿಟ್ಟೆ, ಇರ್ವತ್ತೂರು ಗ್ರಾಮಗಳಲ್ಲಿ 44 ಮನೆಗಳಿಗೆ ಹಾನಿಯಾಗಿದೆ.

ಕುಂದಾಪುರ ತಾಲ್ಲೂಕಿನ ಹಕ್ಲಾಡಿ, ತಲ್ಲೂರು, ಕಾವ್ರಾಡಿ, ಅನಗಳ್ಳಿ, ಕುಂದಾಪುರ ಗ್ರಾಮ, ಕುಂಭಾಶಿ, ಹೆಸ್ಕತ್ತೂರು, ಕುಂದ ಬಾರಂದಾಡಿ, ಯಡ್ಯಾಡಿ ಮಡ್ಯಾಡಿ ಗ್ರಾಮಗಳ 10 ಮನೆಗಳು ಮಳೆಗೆ ಹಾನಿಗೊಳಗಾಗಿವೆ.

ಬ್ರಹ್ಮಾವರ ತಾಲ್ಲೂಕಿನ ನೀಲಾವರ, ಹೆಗ್ಗುಂಜೆ, ಮಟಪಾಡಿ, ಮಣೂರು, ಕೋಡಿ, ಹೇರೂರು, ಆರೂರು, ಹನೆಹಳ್ಳಿ, ಪಾಂಡೇಶ್ವರ ಗ್ರಾಮ, ಪೆಜಮಂಗೂರು, ಹಾವಂಜೆ, ಉಪ್ಪೂರು ಗ್ರಾಮಗಳಲ್ಲಿ 17 ಮನೆಗಳು ಮಳೆಯಿಂದ ಕುಸಿದು ಬಿದ್ದಿವೆ.

ಬೈಂದೂರು ತಾಲ್ಲೂಕಿನ ಯಡ್ತರೆ, ಬೈಂದೂರು, ಶಿರೂರು, ಪಡುವರಿ, ನಂದನವನ, ಕೆರ್ಗಾಲು, ಕಿರಿಮಂಜೇಶ್ವರ, ಕಾಲ್ತೋಡು, ಹೆರಂಜಾಲು ಗ್ರಾಮಗಳಲ್ಲಿ 15 ಮನೆಗಳಿಗೆ ಹಾನಿಯಾಗಿದೆ.

ಕಾಪು ತಾಲ್ಲೂಕಿನಪಾದೂರು, ಪಿಲಾರು, ಪಡು, ಉಳಿಯಾರು ಗೋಳಿ, ಕಳತ್ತೂರು, ಪಾಂಗಾಳದಲ್ಲಿ 14 ಮನೆಗಳ ಗೋಡೆ ಕುಸಿದಿದೆ. ಹೆಂಚುಗಳು ಹಾರಿಹೋಗಿವೆ. ಮನೆಗೆ ನೀರು ನುಗ್ಗಿ ಅಪಾರ ಪ್ರಮಾಣ ಆಸ್ತಿ ನಷ್ಟವಾಗಿದೆ.

ನೆರೆ ಇಳಿಮುಖ:ಮಂಗಳವಾರ ಸುರಿದ ಮಳೆಗೆ ಬನ್ನಂಜೆ, ಮೂಡನಿಡಂಬೂರು, ಪಡುಕೆರೆ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಮಳೆ ಕ್ಷೀನವಾಗಿದ್ದರಿಂದ ನೀರು ಇಳಿಮುಖವಾಗಿದ್ದು, ಮನೆಗಳ ದುರಸ್ಥಿ ಕಾರ್ಯ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.