ADVERTISEMENT

ಉಡುಪಿ | ಸ್ವರ್ಣಾ ನದಿಯಲ್ಲಿ ಪ್ರವಾಹ ಮುನ್ನೆಚ್ಚರಿಕೆ

ಸೌಡಾ, ಉಪ್ಪೂರಿನಲ್ಲಿ ನೆರೆ; ಇಬ್ಬರ ರಕ್ಷಣೆ, ಭಾನುವಾರ ರೆಡ್‌ ಅಲರ್ಟ್‌

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 12:36 IST
Last Updated 8 ಆಗಸ್ಟ್ 2020, 12:36 IST

ಉಡುಪಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಕುಂದಾಪುರ ತಾಲ್ಲೂಕಿನ ಹಾಲಾಡಿ ಸಮೀಪದ ಸೌಡದಲ್ಲಿ ನೆರೆ ಬಂದಿದೆ. ಅಲ್ಲಿನ ಮನೆಯೊಂದರಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಿ ಸಮೀಪದ ಶಾಲೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

ಬ್ರಹ್ಮಾವರದ ಉಪ್ಪೂರಿನಲ್ಲಿ ನೆರೆ ಹೆಚ್ಚಾಗಿದ್ದು, ಹಾವಂಜೆಯಲ್ಲಿ ಮಳೆ ನೀರಿನಲ್ಲಿ ಸಿಲುಕಿದ್ದ ವೃದ್ಧರನ್ನು ರಕ್ಷಣೆ ಮಾಡಲಾಗಿದೆ.

ಪ್ರವಾಹ ಮುನ್ನೆಚ್ಚರಿಕೆ:ಎಣ್ಣೆಹೊಳೆಯ ಸ್ವರ್ಣ ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ತೀವ್ರ ಪ್ರವಾಹ ಉಂಟಾಗುವ ಸಂಭವವಿದೆ ಎಂಧು ಕೇಂದ್ರ ಜಲ ಆಯೋಗದ ಪ್ರವಾಹ ಮುನ್ಸೂಚನೆ ಮಾನಿಟರಿಂಗ್ ನಿರ್ದೇಶನಾಲಯ ಎಚ್ಚರಿಕೆ ನೀಡಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ.

ADVERTISEMENT

ನದಿಪಾತ್ರದ ಗ್ರಾಮಗಳಿಗೆ ತುರ್ತು ಭೇಟಿನೀಡಿ ಪರಿಸ್ಥಿತಿ ಅವಲೋಕಿಸುವಂತೆ ಹಾಗೂ ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 12.3 ಸೆ.ಮೀ ಮಳೆಯಾಗಿದ್ದು, ಕಾರ್ಕಳದಲ್ಲಿ ಗರಿಷ್ಠ 13.2 ಸೆ.ಮೀ ಮಳೆ ಬಿದ್ದಿದೆ. ಆ.9ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್‌ ಅಲರ್ಟ್‌ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.