ADVERTISEMENT

ಕೆಎಂಸಿಯಲ್ಲಿ ಅಪರೂಪದ ಗ್ಲುಕೋಮ ಶಸ್ತ್ರಚಿಕಿತ್ಸೆ

ಕಹೂಕ್ ಡುಯಲ್ ಬ್ಲೇಡ್ ಬಳಕೆ, ದೇಶದಲ್ಲೇ ಮೊದಲ ಪ್ರಯೋಗ: ವೈದ್ಯರ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 7:11 IST
Last Updated 13 ಏಪ್ರಿಲ್ 2019, 7:11 IST
ಅಪರೂಪದ ಕಹೂಕ್ ಡುಯಲ್ ಬ್ಲೇಡ್
ಅಪರೂಪದ ಕಹೂಕ್ ಡುಯಲ್ ಬ್ಲೇಡ್   

ಉಡುಪಿ: ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯಲ್ಲಿ ಈಚೆಗೆ ಅಪರೂಪದ ಕಹೂಕ್ ಡುಯಲ್ ಬ್ಲೇಡ್ ಎಂಬ ಕನಿಷ್ಠ ಗಾಯದ ಗ್ಲುಕೋಮಾ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಈ ಮೂಲಕ ಕಸ್ತೂರ ಬಾ ಆಸ್ಪತ್ರೆಯು ದೇಶದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದು ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಸುಲತಾ ವಿ.ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.

‘ಆಧುನಿಕ ಕಹೂಕ್ ಡುಯಲ್ ಬ್ಲೇಡ್ ಕನಿಷ್ಠ ಗಾಯದ ಶಸ್ತ್ರಚಿಕಿತ್ಸೆಯಾಗಿದ್ದು, ಸರಳ ಮತ್ತು ಪರಿಣಾಮಕಾರಿ ವಿಧಾನ. ಈ ಶಸ್ತ್ರಚಿಕಿತ್ಸೆಯಲ್ಲಿ ಕಣ್ಣಿನೊಳಗೆ ಬ್ಲೇಡ್ ತಲುಪಿಸಿ ಕಣ್ಣಿನ ಗುಡ್ಡೆಯೊಳಗಿನ ದ್ರವಾಂಶದ ಹರಿವನ್ನು ಸುಸೂತ್ರಗೊಳಿಸಲಾಗುತ್ತದೆ. ಗುಡ್ಡೆಯೊಳಗಿನ ಒತ್ತಡವನ್ನು ತಗ್ಗಿಸಲಾಗುತ್ತದೆ’ ಎಂದು ವೈದ್ಯರು ತಿಳಿಸಿದ್ದಾರೆ.‌

ADVERTISEMENT

ಆಯ್ದ ರೋಗಿಗಳಿಗೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಬಹುದಾಗಿದ್ದು,ಇದರಿಂದ ಪ್ರತಿದಿನ ಗ್ಲುಕೋಮಾ ರೋಗಿಯು ಕಣ್ಣಿನ ಔಷಧಿಯ ಬಳಕೆಯನ್ನು ನಿವಾರಿಸಬಹುದು. ಗ್ಲುಕೋಮಾ ರೋಗಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.

ಕಣ್ಣು ಗುಡ್ಡೆಯ ಒಳಭಾಗದಲ್ಲಿ ಒತ್ತಡ ಹೆಚ್ಚಾಗಿ ದೃಷ್ಟಿ ನರಗಳಿಗೆ ಶಾಶ್ವತ ಹಾನಿಯಾಗುವುದು ಗ್ಲಕೋಮಾ ರೋಗದ ಪ್ರಮುಖ ಲಕ್ಷಣ. ಈ ರೋಗದ ಪತ್ತೆ ವಿಳಂಬವಾಗುವುದರಿಂದ, ಹಾನಿಯ ಸ್ವರೂಪ ಶಾಶ್ವತವಾಗಿರುತ್ತದೆ. ಸಾಮಾನ್ಯವಾಗಿ ಗ್ಲುಕೋಮಾಕ್ಕೆ ಟ್ರಬೆಕ್ಯುಲೆಕ್ಟಮಿ ಎಂಬ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದು ಪರಿಣಾಮಕಾರಿ ಚಿಕಿತ್ಸೆಯಾದರೂ ಸಂಕೀರ್ಣವಾದ ತೊಂದರೆಗಳ ಅಪಾಯ ಇರುತ್ತದೆ. ಆದರೆ, ಹೊಸ ರೀತಿಯ ಕಹೂಕ್ ಡುಯಲ್ ಬ್ಲೇಡ್ ಶಸ್ತ್ರಚಿಕಿತ್ಸೆಯಿಂದ ಅಪಾಯ ಬಹಳ ಕನಿಷ್ಟ ಮಟ್ಟದ್ದಾಗಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ.

ಕಸ್ತೂರ ಬಾ ಆಸ್ಪತ್ರೆಯಲ್ಲಿ ಡಾ.ವಿಜಯಾ ಪೈ, ಡಾ.ಕೆ.ಐ.ಆರ್.ನೀತಾ ಗ್ಲುಕೋಮಾ ಚಿಕಿತ್ಸೆಯ ನುರಿತ ತಜ್ಞರಾಗಿದ್ದು, ಕನಿಷ್ಠ ಗಾಯದ ಗ್ಲಕೋಮಾ ಶಸ್ತ್ರಚಿಕಿತ್ಸೆಯಲ್ಲಿ ತರಬೇತಿ ಪಡೆದು ಪರಿಣತಿ ಸಾಧಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ ಶೆಟ್ಟಿ ಅಭಿನಂದಿಸಿದ್ದಾರೆ.

ಉಡುಪಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಗ್ಲುಕೋಮಾ ರೋಗಿಗಳಿಗೆ ಹೊಸ ಶಸ್ತ್ರಚಿಕಿತ್ಸೆಯು ವರದಾನವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.