ADVERTISEMENT

ಉಡುಪಿ ಜಿಲ್ಲೆಯಲ್ಲಿ ಮರಳು ದರ ಏರಿಕೆ

ಏಳು ಸದಸ್ಯರ ಸಮಿತಿ ಸಭೆಯಲ್ಲಿ ನಿರ್ಧಾರ: ಜಿಲ್ಲಾಧಿಕಾರಿ ಜಿ.ಜಗದೀಶ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 14:31 IST
Last Updated 19 ಸೆಪ್ಟೆಂಬರ್ 2020, 14:31 IST
ಜಿ. ಜಗದೀಶ್‌
ಜಿ. ಜಗದೀಶ್‌   

ಉಡುಪಿ:ಸರ್ಕಾರ ಪ್ರತಿ ಮೆಟ್ರಿಕ್‌ ಟನ್ ಮರಳಿಗೆ ರಾಜಧನವನ್ನು ₹ 80ಕ್ಕೆ ಹೆಚ್ಚಿಸಿದ್ದು, ರಾಜಧನದೊಂದಿಗೆ ಇತರೆ ಶುಲ್ಕಗಳನ್ನು ಪರವಾನಿಗೆದಾರರು ಹೆಚ್ಚುವರಿಯಾಗಿ ಸರ್ಕಾರಕ್ಕೆ ಪಾವತಿಸಬೇಕಾಗಿರುವುದರಿಂದ ಮರಳು ದರವನ್ನು ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ದಿಬ್ಬ ತೆರವು ಸಂಬಂಧ ರಚಿಸಲಾಗಿರುವ ಜಿಲ್ಲಾಮಟ್ಟದ 7 ಸದಸ್ಯರ ಸಮಿತಿ ಸಭೆಯಲ್ಲಿ ಮರಳು ಬೆಲೆ ಏರಿಕೆ ನಿರ್ಧಾರ ಮಾಡಲಾಗಿದೆ ಎಂದು ಶನಿವಾರ ತಿಳಿಸಿದ್ದಾರೆ.

ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿನ ಸ್ವರ್ಣಾ, ಸೀತಾ ಮತ್ತು ಪಾಪನಾಶಿನಿ ನದಿ ವ್ಯಾಪ್ತಿಗಳಲ್ಲಿ ಮರಳು ದಿಬ್ಬಗಳಲ್ಲಿ ತೆರವುಗೊಳಿಸಿದ ಮರಳಿನ ದರ ಪ್ರತಿ ಟನ್‌ಗೆ ₹ 550 ರಿಂದ ₹ 600ಕ್ಕೆ ಹೆಚ್ಚಿಸಲಾಗಿದೆ. ಅಂದರೆ 10 ಮೆಟ್ರಿಕ್‌ ಟನ್ ಮರಳಿಗೆ ₹ 6,000 ದರ ನಿಗದಿಯಾಗಿದೆ.

ADVERTISEMENT

ಲೋಡಿಂಗ್ ವೆಚ್ಚ 8 ರಿಂದ 10 ಮೆ.ಟನ್‌ ವಾಹನಕ್ಕೆ ₹ 700, 4 ರಿಂದ 8 ಮೆ.ಟನ್ ವಾಹನಕ್ಕೆ ₹ 500, 1 ರಿಂದ 4 ಮೆಟ್ರಿಕ್ ಟನ್‌ ₹ 300 ಪಾವತಿಸಬೇಕು.

ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದರ:

ದೊಡ್ಡ ಲಾರಿಗೆ 20 ಕಿ.ಮೀ.‌ವರೆಗೆ ಮರಳು ಸಾಗಾಣೆ ದರ ₹ 3,000 (8 ರಿಂದ 10ಮೆ.ಟನ್) ನಂತರದ ಪ್ರತಿ ಕಿ.ಮೀ‌ಗೆ ₹ 50 ದರ ನಿಗದಿಯಾಗಿದೆ.

ಮಧ್ಯಮ ಗಾತ್ರದ ವಾಹನ: 20 ಕಿ.ಮೀ.‌ವರೆಗೆ (4 ರಿಂದ 8 ಮೆ.ಟನ್) ₹ 2000, ನಂತರ ಪ್ರತಿ ಕಿ.ಮೀ‌ಗೆ ₹ 40 ದರ ಇದೆ.

ಸಣ್ಣ ವಾಹನಗಳಿಗೆ: 20 ಕಿ.ಮೀ.‌ವರೆಗೆ ಸಾಗಾಣೆ ದರ (1 ರಿಂದ 4 ಮೆ.ಟನ್) ₹ 1,500, ನಂತರದ ಪ್ರತಿ ಕಿ.ಮೀ.ಗೆ ₹ 35 ಬೆಲೆ ನಿಗದಿಯಾಗಿದೆ.

ನಿಗದಿಗಿಂತ ಹೆಚ್ಚಿನ ದರ ಸಂಗ್ರಹಿಸಿದರೆ ಸಾರ್ವಜನಿಕರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ದೂರು ನೀಡಬಹುದು. ದೂರವಾಣಿ: 0820-2572333, ಜಿಲ್ಲಾ ನಿಯಂತ್ರಣಾ ಕೊಠಡಿ: 0820-2574802 1077 (ಟೋಲ್ ಫ್ರೀ) ಸಂಪರ್ಕಿಸಬಹುದು.

ಅಧಿಕಾರಿಗಳ ಮೊಬೈಲ್: ಆರ್. ಪದ್ಮಶ್ರೀ: 9980951087, ಗೌತಮ್ ಶಾಸ್ತ್ರೀ: 6361286320, ಸಂಧ್ಯಾಕುಮಾರಿ: 9901370559 ಹಾಜಿರಾ ಸಜಿನಿ: 9663836959 ಅವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.