ಉಡುಪಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ 27ನೇ ಶಿಷ್ಯೋಪನಯನ ಸಮಾರಂಭ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಶುಕ್ರವಾರ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಮತಾ ಕೆ.ವಿ., ಹೊಸ ಆವಿಷ್ಕಾರಗಳ ಮೂಲಕ ಆಯುರ್ವೇದದ ಜ್ಞಾನವನ್ನು ಪ್ರಚುರಪಡಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೇರಳ ಸರ್ಕಾರದ ಆಯುರ್ವೇದ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಎಂ.ಆರ್. ವಾಸುದೇವನ್ ನಂಬೂದಿರಿ ಮಾತನಾಡಿ, ಶಿಷ್ಯೋಪನಯ ಸಂಸ್ಕಾರದ ಪ್ರಾಮುಖ್ಯತೆ ತಿಳಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಶಿಷ್ಯೋಪನಯನ ಸಂಸ್ಕಾರದ ಉದ್ದೇಶವನ್ನು ವಿವರಿಸಿದರು.
ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ಶ್ರೀಲತಾ ಕಾಮತ್ ಅವರು ಸಂದೇಶ ವಾಚನ ಮಾಡಿದರು. ಆಡಳಿತ ವಿಭಾಗ ಮುಖ್ಯಸ್ಥ ಡಾ. ವೀರಕುಮಾರ ಕೆ. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಬೋಧನೆ ನೆರವೇರಿಸಿದರು.
ಸ್ನಾತಕ ವಿಭಾಗದ ಡೀನ್ ಡಾ. ರಜನೀಶ್ ವಿ. ಗಿರಿ ಅತಿಥಿಗಳನ್ನು ಪರಿಚಯಿಸಿದರು. ಈ ವೇಳೆ ಸಂಸ್ಕೃತ ಭಾಷಾ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದ ಪ್ರಯುಕ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಭಾವಚಿತ್ರ ಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಡಾ.ಶ್ರೀನಿಧಿ ಧನ್ಯ, ಡೀನ್ ಡಾ.ಅಶೋಕ್ ಕುಮಾರ್ ಬಿ.ಎನ್. ಇದ್ದರು. ಸಹ ಪ್ರಾಧ್ಯಾಪಕ ಡಾ.ಅರ್ಹಂತ್ ಕುಮಾರ್ ನಿರೂಪಿಸಿದರು. ಅನಂತರ ‘ಉಜ್ವಲ’ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.