ADVERTISEMENT

ಸೀ ವಿಜಿಲ್ ಅಣಕು ಕಾರ್ಯಾಚರಣೆ- 22ರಿಂದ

ಸಾರ್ವಜನಿಕ ಸ್ಥಳಗಳಲ್ಲಿ ತಪಾಸಣೆ: ನಾಗರಿಕರು ಸಹಕರಿಸಬೇಕು: ಜಿಲ್ಲಾಧಿಕಾರಿ ಮನವಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 15:03 IST
Last Updated 18 ಜನವರಿ 2019, 15:03 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸೀ ವಿಜಿಲ್‌ ಅಣಕು ಕಾರ್ಯಾಚರಣೆ ಪೂರ್ವಭಾವಿ ಸಭೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸೀ ವಿಜಿಲ್‌ ಅಣಕು ಕಾರ್ಯಾಚರಣೆ ಪೂರ್ವಭಾವಿ ಸಭೆ ನಡೆಯಿತು.   

ಉಡುಪಿ: ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಹಾಗೂ ಭದ್ರತಾ ದೃಷ್ಟಿಯಿಂದ ರಕ್ಷಣಾ ಕ್ರಮಗಳ ಸ್ವಯಂ ಮೌಲ್ಯ ಮಾಪನಕ್ಕೆ ಜ.22 ರಿಂದ 23ರವರೆಗೆ ಜಿಲ್ಲೆಯಾದ್ಯಂತ ಸೀ ವಿಜಿಲ್ ಅಣಕು ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಶುಕ್ರವಾರ ಕಚೇರಿಯಲ್ಲಿ ನಡೆದ, ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಣಕು ಕಾರ್ಯಾಚರಣೆ ಸಂದರ್ಭ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಬೀಚ್‌ಗಳು, ದೇವಸ್ಥಾನ, ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣ ಹಾಗೂ ಪ್ರಮುಖ ವಾಣಿಜ್ಯ ಸಂಕೀರ್ಣದಲ್ಲಿ ವ್ಯಾಪಕ ತಪಾಸಣೆ ನಡೆಯಲಿದ್ದು, ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು.

ಈ ಸ್ಥಳಗಳಲ್ಲಿ ಅಪರಿಚಿತ ವಸ್ತುಗಳು ಕಂಡು ಬಂದಲ್ಲಿ ಪೊಲೀಸ್ ಕಂಟ್ರೊಲ್ ರೂಂ 100ಗೆ , ಕರಾವಳಿ ಕಾವಲು ಪಡೆ ಕಂಟ್ರೊಲ್ ರೂಂ 1093, ಜಿಲ್ಲಾಧಿಕಾರಿ ಕಚೇರಿ ಕಂಟ್ರೊಲ್ ರೂಂ 1077 ಗೆ ಮಾಹಿತಿ ನೀಡುವಂತೆ ತಿಳಿಸಿದರು.

ADVERTISEMENT

ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರದಿಂದ , ಯಾವುದೆ ಲೋಪವಾಗದಂತೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಪೊಲೀಸ್ ಇಲಾಖೆ ವಾಹನಗಳ ವ್ಯಾಪಕ ತಪಾಸಣೆ ನಡೆಸಲಿದ್ದು, ಸಾರ್ವಜನಿಕರು ಸಹಕರಿಸಬೇಕು. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ದೋಣಿಗಳಲ್ಲಿ ಗುರುತಿನ ಚೀಟಿ ಮತ್ತು ಅಗತ್ಯ ದಾಖಲೆ ಪತ್ರಗಳನ್ನು ಇಟ್ಟುಕೊಳ್ಳುವಂತೆ ಹಾಗೂ ಸಮುದ್ರದಲ್ಲಿ ಅಪರಿಚಿತ ದೋಣಿಗಳು ಹಾಗೂ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಮೀನುಗಾರರ ಮುಖಂಡರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.