ADVERTISEMENT

ಉಡುಪಿ: ಬಡ ದಂಪತಿಯ ಮನೆಗೆ ಹರಿಯಿತು ಸೆಲ್ಕೊ ಬೆಳಕು

‘ಪ್ರಜಾವಾಣಿ’ ವರದಿಗೆ ಸ್ಪಂದನ: ಮನೆಗೆ ಸೋಲಾರ್ ಉಪಕರಣಗಳ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 16:01 IST
Last Updated 7 ಆಗಸ್ಟ್ 2021, 16:01 IST
ಹೆಗ್ಗುಂಜೆಯ ಮುರಾರಿ ಮರಾಠೆ ಹಾಗೂ ಪ್ರಭಾವತಿ ದಂಪತಿ ಮನೆಗೆ ಸೆಲ್ಕೊ ಸಂಸ್ಥೆಯಿಂದ ಸೋಲಾರ್ ವಿದ್ಯುತ್ ಉಪಕರಣ ಅಳವಡಿಸಲಾಯಿತು.
ಹೆಗ್ಗುಂಜೆಯ ಮುರಾರಿ ಮರಾಠೆ ಹಾಗೂ ಪ್ರಭಾವತಿ ದಂಪತಿ ಮನೆಗೆ ಸೆಲ್ಕೊ ಸಂಸ್ಥೆಯಿಂದ ಸೋಲಾರ್ ವಿದ್ಯುತ್ ಉಪಕರಣ ಅಳವಡಿಸಲಾಯಿತು.   

ಉಡುಪಿ: ಜಾಗದ ದಾಖಲೆಗಳಿಲ್ಲ ಎಂಬ ಕಾರಣಕ್ಕೆ 13 ವರ್ಷಗಳಿಂದ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದೆ ಕತ್ತಲಿನಲ್ಲಿ ಜೀವನ ಸಾಗಿಸುತ್ತಿದ್ದ ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿಯ ಹೆಗ್ಗುಂಜೆ ಗ್ರಾಮದ ಮುರಾರಿ ಮರಾಠೆ ಹಾಗೂ ಪ್ರಭಾವತಿ ನಿವಾಸಕ್ಕೆ ಕೊನೆಗೂ ಬೆಳಕು ಹರಿದಿದೆ.

ಜುಲೈ 31ರಂದು ‘ಪ್ರಜಾವಾಣಿ’ಯಲ್ಲಿ ಕತ್ತಲಲ್ಲಿ ಮಂಕಾಗುತ್ತಿದೆ ಮಕ್ಕಳ ಭವಿಷ್ಯ ಎಂಬ ಶೀರ್ಷಿಕೆಯಡಿ ಪ್ರಕಟವಾದ ವಿಶೇಷ ವರದಿ ಗಮನಿಸಿದ ಸೆಲ್ಕೊ ಸೋಲಾರ್ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಪ್ರತಿನಿಧಿಗಳು ಈಚೆಗೆ ಮುರಾರಿ ಮರಾಠೆ ನಿವಾಸಕ್ಕೆ ತೆರಳಿ ಸೋಲಾರ್ ಉಪಕರಣಗಳನ್ನು ಅಳವಡಿಸಿದ್ದಾರೆ. ಕತ್ತಲು ತುಂಬಿದ್ದ ಮನೆಯಲ್ಲಿ ಇದೀಗ ಬೆಳಕು ಮೂಡಿದೆ.

ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆ ಮಾಡಲಾಗದ ಕಾರ್ಯವನ್ನು ಖಾಸಗಿ ಸಂಸ್ಥೆಯೊಂದು ಮುತುವರ್ಜಿ ವಹಿಸಿ ಮಾಡಿದ್ದಕ್ಕೆ ದಂಪತಿ ಸೆಲ್ಕೊ ಕಂಪನಿಗೆ ಕೃತಜ್ಞತೆ ಸಲ್ಲಿಸಿದೆ. ವಿದ್ಯುತ್ ಸಂಪರ್ಕವಿಲ್ಲದೆ ಆನ್‌ಲೈನ್ ತರಗತಿಯಲ್ಲಿ ಭಾಗಿಯಾಗಲು ಸಮಸ್ಯೆ ಎದುರಿಸುತ್ತಿದ್ದ ಮಕ್ಕಳ ಮೊಗದಲ್ಲಿ ಮಂದಹಾಸ ಕಾಣುತ್ತಿದೆ.

ADVERTISEMENT

ಸೆಲ್ಕೊ ಕಂಪೆನಿಯ ಎಎಂ ಸುರೇಶ್ ನಾಯ್ಕ್ ಮಾತನಾಡಿ, ‘ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ 100ಕ್ಕೂ ಹೆಚ್ಚು ಮನೆಗಳಿಗೆ ಸೆಲ್ಕೊ ಸಂಸ್ಥೆ ಉಚಿತವಾಗಿ ಸೋಲಾರ್ ವ್ಯವಸ್ಥೆ ಮಾಡಿದೆ. ಜತೆಗೆ, ಕರ್ಣಾಟಕ ಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ 200ಕ್ಕೂ ಹೆಚ್ಚು ಮನೆಗಳಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಉಪಕರಣಗಳನ್ನು ಅಳವಡಿಸಿದೆ. ವಿದ್ಯುತ್ ಸಂಪರ್ಕ ಇಲ್ಲ ಎಂಬ ಕಾರಣಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬುದು ಸಂಸ್ಥೆಯ ಉದ್ದೇಶ’ ಎಂದರು.

ಸೆಲ್ಕೊ ಆರಂಭವಾಗಿ 26 ವರ್ಷಗಳು ಕಳೆದಿವೆ. 2010ರಲ್ಲಿ ಸೆಲ್ಕೊ ಫೌಂಡೇಷನ್‌ ಕಾರ್ಯಾರಂಭ ಮಾಡಿತು. ಆರಂಭದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಸೋಲಾರ್‌ ಉಪಕರಣಗಳನ್ನು ಉಚಿತವಾಗಿ ಕೊಡಲಾಗುತ್ತಿತ್ತು. ಈಗ ಬಡವರ ಜೀವನಮಟ್ಟ ಸುಧಾರಣೆಗೆ ನೆರವಾಗುವ ಹಾಲು ಕರೆಯುವ ಯಂತ್ರ, ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಸೋಲಾರ್ ಸ್ಮಾರ್ಟ್ ಕ್ಲಾಸ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ನೆರವಿನ ನಿರೀಕ್ಷೆಯಲ್ಲಿ ಕುಟುಂಬ:ಮುರಾರಿ ಮರಾಠಿ ಹಾಗೂ ಪ್ರಭಾವತಿ ದಂಪತಿ ಸರ್ಕಾರಿ ಜಾಗದಲ್ಲಿ ವಾಸವಾಗಿದ್ದು ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಕುಡಿಯುವ ನೀರಿನ ಸಂಪರ್ಕವೂ ಇಲ್ಲ. ದಂಪತಿಯ ಮೂರು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು, ತಾಯಿ ಪ್ರಭಾವತಿ ಬಳಿ ಇರುವ ಸ್ಮಾರ್ಟ್‌ ಫೋನ್‌ನಲ್ಲಿ ಮೂವರು ಮಕ್ಕಳು ಆನ್‌ಲೈನ್ ತರಗತಿ ಕಲಿಯಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.