ADVERTISEMENT

ಹಿರಿಯರಿಗೆ ಬೇಕಿದೆ ಪ್ರೀತಿಯ ಸಾಂಗತ್ಯ

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 14:17 IST
Last Updated 2 ಅಕ್ಟೋಬರ್ 2019, 14:17 IST
ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಮಂಗಳವಾರ ಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಉದ್ಘಾಟಿಸಿದರು.
ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಮಂಗಳವಾರ ಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಉದ್ಘಾಟಿಸಿದರು.   

ಉಡುಪಿ: ಹಿರಿಯ ಜೀವಗಳಿಗೆ ಪ್ರೀತಿತುಂಬಿದ ಮಾತುಗಳು ಹಾಗೂ ಮಕ್ಕಳ ಸಾಂಗತ್ಯ ಹೆಚ್ಚು ಅಗತ್ಯವಿರುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಅಭಿಪ್ರಾಯಪಟ್ಟರು.

ಮಂಗಳವಾರ ಜಿಲ್ಲಾಡಳಿತ ಹಾಗೂ ಇತರ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು, ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದೆ. ಹೆತ್ತವರನ್ನು ಬಿಟ್ಟು ದೂರದಲ್ಲಿ ಮಕ್ಕಳು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ವಯಸ್ಸಾದ ಮೇಲೆ ಹಿರಿಯರು ಮಕ್ಕಉ ಜತೆಗಿರಬೇಕು ಎಂದು ಬಯಸುತ್ತಾರೆ. ಅವರ ಆಸೆಗಳನ್ನು ಮಕ್ಕಳು ಈಡೇರಿಸಬೇಕು ಎಂದರು.

ADVERTISEMENT

ಹಿರಿಯರನ್ನು ಗೌರವಾದರಗಳಿಂದ ನೋಡುತ್ತಿದ್ದ ಪರಂಪರೆ ನಶಿಸಿ ಹೋಗುತ್ತಿದೆ. ಅವಿದ್ಯಾವಂತರಾಗಿದ್ದರೂ ಜೀವನದ ಅನುಭವ ಪಡೆದ ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಿರುತ್ತಿದ್ದರು. ಆದರೆ, ಪ್ರಸ್ತುತ ಆಸ್ತಿ ವ್ಯಾಮೋಹದಿಂದ ಮಕ್ಕಳು ಹೆತ್ತವರನ್ನು ಬೀದಿಗೆ ತಳ್ಳುತ್ತಿರುವ ನಿದರ್ಶನಗಳು ಹೆಚ್ಚಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಹಿರಿಯರ ಪ್ರೀತಿ, ತ್ಯಾಗ, ಸೇವೆಗಳನ್ನು ಮಕ್ಕಳು ನೆನಪಿನಲ್ಲಿಟ್ಟುಕೊಂಡರೆ ಜೀವನ ಸಾರ್ಥಕವಾಗುತ್ತದೆ. ಯುವ ಪೀಳಿಗೆ ಹಿರಿಯ ನಾಗರಿಕರನ್ನು ಪ್ರೀತಿಸುವ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ನಾಗರಿಕರಿಗಿರುವ ಸೇವೆ ಹಾಗೂ ಸೌಲಭ್ಯಗಳನ್ನು ಪಡೆಯುವಾಗ ಸಮಸ್ಯೆಗಳಾದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದರು.

ಹಿರಿಯ ನಾಗರಿಕರಿಗೆ ಇತರ ಸೌಲಭ್ಯಗಳು ಸಿಗುವಲ್ಲಿ ವಿಳಂಬವಾದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರೆ, ಪ್ರಾಧಿಕಾರದ ಸ್ವಯಂ ಸೇವಕರು ಹಾಗೂ ವಕೀಲರು ಅರ್ಜಿದಾರರ ಸಮಸ್ಯೆ ಬಗೆಹರಿಸುವ ಯತ್ನ ಮಾಡಲಿದ್ದಾರೆ ಎಂದರು.

ಹಿರಿಯ ನಾಗರಿಕರ ರಕ್ಷಣೆಗೆ 1090 ಸಹಾಯವಾಣಿಗೆ ಕರೆಮಾಡಿ ಅಗತ್ಯವಿರುವವರು ಸಹಾಯ ಪಡೆಯಬಹುದು ಎಂದರು.

ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ ಮಾತನಾಡಿ, ಹೆತ್ತವರನ್ನು ನಿರ್ಲಕ್ಷಿಸುವ ಮನೋಭಾವ ಹೆಚ್ಚಾಗಿದ್ದು, ವೃದ್ಧಾಶ್ರಮದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವಿಭಕ್ತ ಕುಟುಂಬದ ಪರಿಕಲ್ಪನೆಯಿಂದ ಹಿರಿಯರಲ್ಲಿ ಅಭದ್ರತೆ ಕಾಡುತ್ತಿದೆ. ಆದ್ದರಿಂದ, ಹಿರಿಯ ನಾಗರಿಕರ ಪ್ರಾಮುಖ್ಯತೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವೀಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಎ.ಪಿ.ಕೊಡಂಚ,ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಧುಸೂದನ್ ಉಪಸ್ಥಿತರಿದ್ದರು.

ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹಿರಿಯ ವಕೀಲ ಬಿ.ಮುರಳೀಧರ ವಾರಂಬಳ್ಳಿ ಉಪನ್ಯಾಸ ನೀಡಿದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಸರಳಾ ಬಿ.ಕಾಂಚನ್, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಚಂದ್ರನಾಯ್ಕ್, ಯೋಜನಾ ಸಹಾಯಕ ಗಣೇಶ್ ಮರಾಠೆ, ಡಿಎನ್‍ಎ ಸಂಸ್ಥೆಯ ರೂಪಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.