ಶಿರ್ವ: ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಹಾಲಕ್ಷ್ಮಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಅಧ್ಯಕ್ಷೆ ಚಂದ್ರಾವತಿ ಅವರ ಅಧ್ಯಕ್ಷತೆಯಲ್ಲಿ ಸಮಾಜ ಮಂದಿರ ಕಟ್ಟಡದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೋಟೆ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ ಜತ್ತನ್ನ, ‘ಸಂಜೀವಿನಿ ಸಂಘಗಳು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದು, ಇದರ ಸದುಪಯೋಗ ಪಡೆದುಕೊಂಡಲ್ಲಿ ಗ್ರಾಮದ ಪ್ರಗತಿಗೆ ಸಹಕಾರವಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಸಂಜೀವಿನಿ ಸಂತೆ ಪ್ರಾರಂಭಿಸಲಾಗುವುದು’ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯೋಗೀಶ್ ಮಾತನಾಡಿ, ‘ಸಂಜೀವಿನಿ ಸಂಘವು ಕೋಟೆ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದು, ಗ್ರಾಮಸ್ಥರು ಘನ ಮತ್ತು ದ್ರವ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ನೀಡಿ ಸಹಕರಿಸಬೇಕು’ ಎಂದು ಕೋರಿದರು.
ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಗಂಧ್ ಅವರು, ಕೋಳಿ ಸಾಕಾಣಿಕೆ ಹಾಗೂ ಕೃಷಿ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಅಧಿಕಾರಿ ಸನತ್ ಶೆಟ್ಟಿ, ಆರೋಗ್ಯ ಮಾಹಿತಿ ನೀಡಿದರು. ಕೋಟೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶೃತಿ ಕಾಂಚನ್, ಕಾರ್ಯದರ್ಶಿ ಸುಮಿತ್ರ ಇದ್ದರು.
ದೀಪಿಕಾ ಸ್ವಾಗತಿಸಿದರು. ಕಾರ್ಯದರ್ಶಿ ಕೀರ್ತನಾ ವರದಿ ವಾಚಿಸಿದರು. ಎಂ.ಬಿ.ಕೆ ಚಂದ್ರಕಲಾ ಜಮಾ ಖರ್ಚು ಮಂಡಿಸಿದರು. ಸುಮಲತಾ ನಿರೂಪಿಸಿದರು. ಲಕ್ಷ್ಮಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.