ADVERTISEMENT

ಸಕಲರೊಂದಿಗೆ ಬೆರೆಯುವ ಗುಣ ಶಿವಳ್ಳಿ ಸಮಾಜದ್ದು

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದಲ್ಲಿ ಪರ್ಯಾಯ ಪಲಿಮಾರು ಶ್ರೀ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 16:30 IST
Last Updated 14 ಡಿಸೆಂಬರ್ 2019, 16:30 IST
ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆರಂಭವಾದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನವನ್ನು ಪೇಜಾವರ ಶ್ರೀಗಳು ಉದ್ಘಾಟಿಸಿದರು.
ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆರಂಭವಾದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನವನ್ನು ಪೇಜಾವರ ಶ್ರೀಗಳು ಉದ್ಘಾಟಿಸಿದರು.   

ಉಡುಪಿ:ತುಳು ಶಿವಳ್ಳಿ ಬ್ರಾಹ್ಮಣ ಸಮಾಜದ ಗುರುಗಳಾದ ಮಧ್ವಾಚಾರ್ಯರು ವಿಶ್ವಕ್ಕೆ ತತ್ವಜ್ಞಾನ ಸಿದ್ಧಾಂತ ಕೊಟ್ಟಿದ್ದಾರೆ. ವಾದಿರಾಜರು ಸಂಸ್ಕೃತದ ಮೂಲಕ ಧರ್ಮಜಾಗೃತಿ ಮೂಡಿಸಿದ್ದಾರೆ. ಭಗವದ್ಗೀತೆಗೆ ವ್ಯಾಖ್ಯಾನ ಬರೆದು ಜಗತ್ತು ಭಾರತದತ್ತ ತಿರುಗಿ ನೋಡಿದ್ದಾರೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆರಂಭವಾದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ತುಳು ಶಿವಳ್ಳಿ ಬ್ರಾಹ್ಮಣರಸಂಪ್ರದಾಯಗಳನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಈ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ಮಧ್ವಾಚಾರ್ಯರು, ವಾದಿರಾಜರು ಹಾಗೂ ವಿಜಯಧ್ವಜರು ತೌಳವ ಪರಂಪರೆಯ ಗುರುಗಳು. ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ದೊಡ್ಡ ಶಕ್ತಿಯಾಗಿ ಬೆಳೆಯಬೇಕು. ಸಮಾಜದ ಸಂಘಟನೆಗೆ ಬಲ ತುಂಬಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ADVERTISEMENT

ಮನುಷ್ಯ ಜ್ಞಾನ ಸಂಪಾದನೆಯ ಜತೆಗೆ ದಾನ, ಧರ್ಮದಂತಹ ಪುಣ್ಯ ಕಾರ್ಯ ಮಾಡಬೇಕು. ಪುಣ್ಯ ಸಾವಿನ ನಂತರವೂ ಶಾಶ್ವತವಾಗಿರುತ್ತದೆ ಎಂದು ಮಧ್ವಾಚಾರ್ಯರು ಹೇಳಿದ್ದಾರೆ. ಜ್ಞಾನ ಸಂಪಾದನೆ ಹಾಗೂ ಸತ್‌ ಕರ್ಮಗಳಿಗೆ ಸ್ವರ್ಗದಲ್ಲಿಯೂ ಮನ್ನಣೆ ಸಿಗುತ್ತದೆ ಎಂದರು.

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ತುಳು ಶಬ್ದವೇಸುಂದರ. ತುಳು ಎಂದರೆ ತುಂಬಿ ತುಳುಕುವುದು ಎಂಬ ಅರ್ಥ. ತುಳು ಭಾಷೆಗೆ ಲಿಪಿ ಇದ್ದು, ಸಾವಿರಾರು ವರ್ಷಗಳ ಹಿಂದೆ ಬರೆದಿರುವ ತುಳು ಲಿಪಿಯ ಗ್ರಂಥ ಇಂದಿಗೂ ಲಭ್ಯವಿದೆ ಎಂದರು.

ತುಳು ಮಲಯಾಳಂ ಲಿಪಿಯಲ್ಲ. ಶಿವಳ್ಳಿ ಬ್ರಾಹ್ಮಣ ಬೇರೆಯವರಿಂದ ಪಡೆಯುವ ಸಮಾಜವಲ್ಲ; ದಾನ ಮಾಡುವ ಸಮಾಜ.ಕೇರಳದವರಿಗೆ ತುಳು ಲಿಪಿಧಾರೆ ಎರೆದಿದ್ದು ನಾವು. ವಿಪರ್ಯಾಸ ಎಂದರೆ ತುಳು ಲಿಪಿಯನ್ನು ನಾವೇ ಮರೆತುಬಿಟ್ಟಿದ್ದೇವೆ ಎಂದರು.

ಶಿವಳ್ಳಿ ಬ್ರಾಹ್ಮಣ ಸಮಾಜ ನೀರಿನಂತೆ, ಹಾಲಿನಂತೆ ಎಲ್ಲ ಸಮಾಜದೊಂದಿಗೂ ಬೆರೆಯುತ್ತದೆ. ಜತೆಗೆ, ಸ್ವಾಭಿಮಾನಿ ಸಮುದಾಯವಾಗಿದೆ.ಪ್ರಸ್ತುತ ಸಮಾಜ ಕ್ಷೀಣಿಸುತ್ತಿದ್ದು, ಅದರ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದರು.

ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿ, ಸರ್ವಾಂಗೀಣ ಬೆಳವಣಿಗೆಗೆಸಮಾಜ ಗಟ್ಟಿಯಾಗಬೇಕು. ಎಲ್ಲ ಕ್ಷೇತ್ರಗಳಲ್ಲಿಯೂ ಶಕ್ತಿ ವೃದ್ಧಿಸಿಕೊಳ್ಳಬೇಕು. ಕೊರತೆಗಳನ್ನು ಸರಿಪಡಿಸಿಕೊಂಡು ಬಲವರ್ಧನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಆಧ್ಯಾತ್ಮಿಕ, ಧಾರ್ಮಿಕ ವಿಚಾರದಲ್ಲಿ ಸಮಾಜದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮಠ, ಮಂದಿರಗಳನ್ನು
ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗಿನಿಂದಲೇ ಯೋಚಿಸಬೇಕು.ಸಮಾಜದ ಜನಸಂಖ್ಯೆ ಹೆಚ್ಚಾಗಿ ಎಲ್ಲ ಕ್ಷೇತ್ರಗಳಿಗೂವ್ಯಾಪಿಸಬೇಕು. ಆಗಮಾತ್ರ ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿ ಗಟ್ಟಿಕೊಳ್ಳಲು ಸಾಧ್ಯ ಎಂದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರು, ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥರು ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷರಾದ ರಾಮದಾಸ್ ಮಡಮಣ್ಣಾಯ, ಬಾಲಕೃಷ್ಣ ಮುಡಂಬಡಿತ್ತಾಯ, ಗಿರಿರಾಜನ್‌, ರಾಮದಾಸ ಭಟ್‌,ಪ್ರಧಾನ ಸಂಚಾಲಕ ಎಂ.ಬಿ.ಪುರಾಣಿಕ್‌, ಗೋಪಾಲ ಮೊಗೇರಾಯ, ಮಂಜುನಾಥ್ ಉಪಾಧ್ಯಾಯ, ಹರಿಕೃಷ್ಣ ಪುನರೂರು, ವೆಂಕಟರಮಣ ಪೋತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.