ADVERTISEMENT

‘ಜಾನಪದಕ್ಕೂ ಕಾರಂತರ ಕೊಡುಗೆ ಅನನ್ಯ’

ಅಧ್ಯಯನ ಶಿಬಿರದಲ್ಲಿ ಜಾನಪದ ಸಂಶೋಧಕ ಎಸ್.ಎ. ಕೃಷ್ಣಯ್ಯ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:38 IST
Last Updated 16 ಮೇ 2025, 14:38 IST
ಡಾ. ಶಿವರಾಮ ಕಾರಂತರ ಬರಹ ಮತ್ತು ಜಾನಪದ ಅಧ್ಯಯನ ಶಿಬಿರವನ್ನು ಎಸ್.ಎ. ಕೃಷ್ಣಯ್ಯ ಉದ್ಘಾಟಿಸಿದರು
ಡಾ. ಶಿವರಾಮ ಕಾರಂತರ ಬರಹ ಮತ್ತು ಜಾನಪದ ಅಧ್ಯಯನ ಶಿಬಿರವನ್ನು ಎಸ್.ಎ. ಕೃಷ್ಣಯ್ಯ ಉದ್ಘಾಟಿಸಿದರು   

ಉಡುಪಿ: ಕರಾವಳಿಯ ಜಾನಪದವನ್ನು ಕೇಂದ್ರವಾಗಿಟ್ಟುಕೊಂಡು ಡಾ. ಶಿವರಾಮ ಕಾರಂತರು ಸಾಹಿತ್ಯ ರಚನೆ ಮಾಡಿದ್ದಾರೆ. ಈ ದೃಷ್ಟಿಯಿಂದ ಕಾರಂತರ ಸಾಹಿತ್ಯದ ಅಧ್ಯಯನವೆಂದರೆ ಕರಾವಳಿಯ ಜಾನಪದ ಅಧ್ಯಯನವಾಗುತ್ತದೆ ಎಂದು ಜಾನಪದ ಸಂಶೋಧಕ ಎಸ್.ಎ. ಕೃಷ್ಣಯ್ಯ ಹೇಳಿದರು.

ನಗರದ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಸಭಾಭವನದಲ್ಲಿ ಕೋಟ ಶಿವರಾಮ ಕಾರಂತ ಟ್ರಸ್ಟ್, ಅಜ್ಜರಕಾಡಿನ ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಡಾ. ಶಿವರಾಮ ಕಾರಂತರ ಬರಹ ಮತ್ತು ಜಾನಪದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನ, ಭೂತಾರಾಧನೆ, ಕಂಗಿಲು ಕುಣಿತ ಮೊದಲಾದವುಗಳನ್ನು ಆ ಕಾಲದಲ್ಲೇ ಕಾರಂತರು ದಾಖಲೀಕರಣ ಮಾಡಿದ್ದರು ಎಂದು ಹೇಳಿದರು.

ADVERTISEMENT

ಶಿವರಾಮ ಕಾರಂತರು ದಾಖಲೀಕರಿಸಿರುವ ಯಕ್ಷಗಾನದ 60 ರಾಗಗಳನ್ನು ಮುಂದಿನ ಪೀಳಿಗೆಗೂ ತಿಳಿಸುವ ಕೆಲಸವಾಗಬೇಕು ಎಂದರು.

ಡಾ. ಶಿವರಾಮ ಕಾರಂತ ಟ್ರಸ್ಟ್‌ ಅಧ್ಯಕ್ಷ ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಶಿವರಾಮ ಕಾರಂತರು ಸಾಹಿತ್ಯ ಮಾತ್ರವಲ್ಲದೇ, ಪರಿಸರದ ಬಗೆಗೂ ನಡೆಸಿರುವ ಹೋರಾಟ ಮಹತ್ತರವಾಗಿದೆ. ದಿಟ್ಟತನ, ನೇರ ಮಾತು ಅವರಲ್ಲಿ ಕಾಣುತ್ತಿತ್ತು ಎಂದು ಹೇಳಿದರು.

ಕರ್ನಾಟಕ ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ಪ್ರಕೃತಿಯ ಸೂಕ್ಷ್ಮತೆಗಳನ್ನು ಗಮನಿಸಿ, ಅದನ್ನು ತಮ್ಮ ಸಾಹಿತ್ಯದ ಮೂಲಕ ಜನರಿಗೆ ತಲುಪಿಸಿದ ಕೆಲವೇ ಕೆಲವು ಸಾಹಿತಿಗಳಲ್ಲಿ ಕಾರಂತರು ಒಬ್ಬರು. ವಿವಿಧ ಕ್ಷೇತ್ರಗಳಲ್ಲಿ ಅವರು ಹೊಂದಿದ್ದ ಜ್ಞಾನ ಅಗಾಧವಾಗಿದೆ ಎಂದರು.

ಡಾ. ಜಿ.ಶಂಕರ್ ಮಹಿಳಾ ಸರ್ಕಾರಿ ಪ್ರಥಮ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಶ್ರೀಧರ್ ಪ್ರಸಾದ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಈಚೆಗೆ ನಿಧನರಾದ ಪ್ರೊ. ಹೇರಂಜೆ ಕೃಷ್ಣ ಭಟ್ ಹಾಗೂ ನಂದಳಿಕೆ ಬಾಲಚಂದ್ರ ರಾವ್ ಅವರಿಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕನ್ನಡ ವಿಭಾಗದ ಮುಖ್ಯಸ್ಥೆ ನಿಕೇತನಾ, ಸಹ ಪ್ರಾಧ್ಯಾಪಕ ಪ್ರಸನ್ನ ಪಿ.ಬಿ., ಪ್ರಾಧ್ಯಾಪಕಿ ಹೇಮಾವತಿ ಇದ್ದರು. ಡಾ. ಶಿವರಾಮ ಕಾರಂತ ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ರಿವೇಣಿ ನಿರೂಪಿಸಿದರು. ಶಿವರಾಮ ಕಾರಂತ ಟ್ರಸ್ಟ್ ಸದಸ್ಯ ಜಿ.ಎಂ. ಶರೀಫ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.