ADVERTISEMENT

ಸ್ವಚ್ಛತೆಯ ಮೂಲಕ ಗಾಂಧೀಜಿಗೆ ಶ್ರದ್ಧಾಂಜಲಿ ಸಲ್ಲಿಕೆ

ಗಾಂಧಿ ಜಯಂತಿಯಲ್ಲಿ ಶಾಸಕ ರಘುಪತಿ ಭಟ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 12:36 IST
Last Updated 2 ಅಕ್ಟೋಬರ್ 2019, 12:36 IST
ಬುಧವಾರ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಗಾಂಧೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.
ಬುಧವಾರ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಗಾಂಧೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.   

ಉಡುಪಿ: ಸ್ವಚ್ಛತೆ ಮನೆಯಿಂದಲೇ ಶುರುವಾಗಬೇಕು. ಮನೆ, ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತದೆ. ಸ್ವಚ್ಛತೆಯ ಪಾಠ ಹೇಳಿದ ಮಹಾತ್ಮಾ ಗಾಂಧೀಜಿ ಅವರ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸೋಣ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದರು.

ಬುಧವಾರ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಜನತೆ ಗಾಂಧಿ ತತ್ವಗಳನ್ನು ಗಾಳಿಗೆ ತೂರುತ್ತಿದೆ. ಪ್ರತಿಭಟನೆ, ಚಳವಳಿಗಳು ಅಹಿಂಸೆಯ ಬದಲಾಗಿ ಹಿಂಸಾರೂಪ ತಾಳುತ್ತಿವೆ. ಗಾಂಧೀಜಿ ಅವರ ಸತ್ಯ, ಅಹಿಂಸೆಯ ತತ್ವಗಳು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಕೆಯಾಗಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಗಾಂಧೀಜಿ ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದರು. ಗ್ರಾಮಗಳು ಸ್ವಾವಲಂಬಿಯಾದರೆ ಮಾತ್ರ ದೇಶದ ಅಭಿವೃದ್ಧಿ ಎಂದು ನಂಬಿದ್ದರು. ಅವರ ಆಶಯದಂತೆ ಸರ್ಕಾರ ಗ್ರಾಮ ಸ್ವರಾಜ್ಯದ ಬದಲಾಗಿ ಗ್ರಾಮ ಪಂಚಾಯ್ತಿಗಳನ್ನು ರಚಿಸಿ ಅಧಿಕಾರ ವಿಕೇಂದ್ರೀಕರಣ ಮಾಡಿದೆ. ಜತೆಗೆ, ಗ್ರಾಮಮಟ್ಟದಲ್ಲಿ ಸ್ವಚ್ಛತಾ ಅಭಿಯಾನ ಆರಂಭಿಸಿದ್ದು, 1000 ಗ್ರಾಮ ಪಂಚಾಯ್ತಿಗಳಲ್ಲಿ ಘನ, ದ್ರವ ಸಂಪನ್ಮೂಲ ಘಟಕ ಆರಂಭಿಸಿದೆ ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ಮನೆ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಮಹಾತ್ಮ ಗಾಂಧೀಜಿ ಅವರಿಗೆ ಸ್ವಚ್ಛತೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಕರೆ ನೀಡಿದರು.

ಸ್ವಚ್ಛತೆ ಮನಸ್ಸಿನಿಂದ ಮೂಡಿದಾಗ ಸಮಾಜದಲ್ಲಿ ಬದಲಾವಣೆ ಸಾಧ್ಯ. ಮನೆಯಲ್ಲಿ ಕಸ ನಿರ್ವಹಣೆ, ಪ್ಲಾಸ್ಟಿಕ್‌ ಕೈಚೀಲಗಳ ಬದಲಾಗಿ ಬಟ್ಟೆಯ ಕೈಚೀಲಗಳ ಬಳಕೆ ಮಾಡಿದರೆ ಸ್ವಚ್ಛ ಉಡುಪಿ ಕನಸು ಸಾಕಾರವಾಗಲಿದೆ ಎಂದರು.

ಪ್ಲಾಸ್ಟಿಕ್‌ ನಿಷೇಧ ಬೇಡ ಎನ್ನುವವರು ಕರ್ವಾಲು ಬಳಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿನೀಡಿದರೆ ಸಮಸ್ಯೆಯ ಗಂಭೀರತೆ ಅರಿವಾಗುತ್ತದೆ. ಬಹುಶಃ 2 ವರ್ಷಗಳಲ್ಲಿ ಅಲ್ಲಿ ಕಸ ಹಾಕಲು ಜಾಗವೇ ಇರುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ರಾಶಿಯಾಗಿ ಬಿದ್ದಿದೆ. ಅದರ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ ಎಂದರು.

ಚಿಂತಕ ದಯಾನಂದ ಶೆಟ್ಟಿ ದೆಂದೂರು ವಿಶೇಷ ಉಪನ್ಯಾಸ ನೀಡಿ, ‘ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಕೊಡಿಸಿದ ಗಾಂಧೀಜಿ, ಅಸ್ಪೃಶ್ಯತೆ ನಿರ್ಮೂಲನೆ ಮಾಡುವ, ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎನ್ನುವ ಕಾಳಜಿ ಹೊಂದಿದ್ದರು. ಗಾಂಧೀಜಿ ಸಮಯ ಪರಿಪಾಲನೆ ಬ್ರಿಟಿಷರ ಮೆಚ್ಚುಗೆಗೆ ಪಾತ್ರವಾಗಿತ್ತು. ಬುದ್ದ, ಚಾಣಕ್ಯ , ನಾರಾಯಣ ಗುರುಗಳ ಚಿಂತನೆಗಳಿಂದ ಗಾಂಧಿ ಪ್ರಭಾವಿತರಾಗಿದ್ದರು’ ಎಂದರು.

ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಉದ್ಯಾನವನ್ನು ಸ್ವಚ್ಛಗೊಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್, ಬಾಲಕೃಷ್ಣ ಶೆಟ್ಟಿ, ಮಾನಸಿ ಪೈ, ಜಿಲ್ಲಾ ಪಂಚಾಯ್ತಿ ಸಿಇಒ ಪ್ರೀತಿ ಗೆಹ್ಲೋಟ್, ಎಎಎಸ್‌ಪಿ ಕುಮಾರ ಚಂದ್ರ, ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಶಿವಕುಮಾರ್ ಉಪಸ್ಥಿತರಿದ್ದರು.

ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಧನಂಜಯ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.