ಶಿರ್ವ: ‘ಶ್ರಾವಣವು ಸಮುದ್ರ ಮಥನದಲ್ಲಿ ಬಂದ ವಿಷ ಕುಡಿದು ಶಿವನು ನೀಲಕಂಠನಾಗಿ ಜಗದ್ರಕ್ಷಕನಾದ ಮಾಸ, ಶಿವನಿಗೆ ಸಮರ್ಪಿತ ತಿಂಗಳು. ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದ, ದೇವರ ಬಗ್ಗೆ ಕೇಳುವ, ತಿಳಿದುಕೊಳ್ಳುವ ಸರಣಿ ಹಬ್ಬಗಳ ಮಾಸ’ ಎಂದು ಕುಂಜಾರುಗಿರಿ ಪಾಜಕ ಆನಂದತೀರ್ಥ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ಅನಸೂಯಾ ಪ್ರಭು ಹೇಳಿದರು.
ಅವರು ಬಂಟಕಲ್ಲು ದುರ್ಗಾಪರಮೆಶ್ವರಿ ದೇವಳದ ಪ್ರಾಂಗಣದಲ್ಲಿ ಶ್ರೀದುರ್ಗಾ ಮಹಿಳಾ ಚಂಡೆ ಬಳಗದ ವತಿಯಿಂದ ಏರ್ಪಡಿಸಿದ ‘ಶ್ರಾವಣ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿ, ‘ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ ಪರಂಪರೆಯನ್ನು ಮುಂದುವರಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹಿಳೆಯರ ಪಾತ್ರವೇ ಪ್ರಧಾನವಾದುದು. ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹಿಳೆಯರು ಹಿಂದೆ ಬೀಳಬಾರದು’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾರಸ್ವತ ಸಂದೇಶ್ ಪತ್ರಿಕೆ ಸಂಪಾದಕ ಸರಳೇಬೆಟ್ಟು ಗೋಪಾಲಕೃಷ್ಣ ನಾಯಕ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕುಸಿಯಯುತ್ತಿದ್ದು, ನೈತಿಕ ಶಿಕ್ಷಣ, ಆದರ್ಶ ಮೌಲ್ಯಗಳನ್ನು ಜಾಗೃತಿಗೊಳಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ಮುನಿಯಾಲು ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನ ಗ್ರಂಥಪಾಲಕಿ ಜ್ಯೋತಿ ಮಾತನಾಡಿದರು. ದೇವಳದ ಮಾಜಿ ಅಧ್ಯಕ್ಷ ಎಂ.ಬಿ.ನಾಯಕ್ ಬನ್ನಂಜೆ, ಕಲಾ ಸಾಧಕಿ ನಿವೃತ್ತ ಪ್ರಾಂಶುಪಾಲೆ ಉಷಾ ನಾಯಕ್, ಯಕ್ಷಗುರು, ಬಹುಮುಖ ಪ್ರತಿಭೆಯ ಕಲಾವಿದ ಗುಳ್ಮೆ ನಾರಾಯಣ ಪ್ರಭು, ಪ್ರಗತಿಪರ ಕೃಷಿಕ ದಂಪತಿಗ ಕರ್ವಾಲು ಸುಬ್ರಾಯ ಕಾಮತ್, ಕಲಾವತಿ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅನಾರೋಗ್ಯ ಪೀಡಿತರಿಗೆ ಧನಸಹಾಯ ವಿತರಿಸಲಾಯಿತು. ಸುಮಂಗಲಿಯರಿಗೆ ಉಡಿ ತುಂಬಿಸುವುದು ನಡೆಯಿತು. ಶ್ರಾವಣ ಮಾಸದ ಸಾಂಪ್ರದಾಯಿಕ ವಿಶೇಷ ಖಾದ್ಯಗಳ ಆತಿಥ್ಯ ಗಮನ ಸೆಳೆಯಿತು.
ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಚೆಂಡೆ ಬಳಗದ ಅಧ್ಯಕ್ಷೆ ಬಂಟಕಲ್ಲು ಗೀತಾ ವಾಗ್ಲೆ ಸ್ವಾಗತಿಸಿದರು. ಕಲಾವಿದೆ ಕುಸುಮಾ ಕಾಮತ್ ನಿರೂಪಿಸಿದರು. ಯುವ ಪ್ರತಿಭೆಗಳಾದ ಸಪ್ನಾ ನಾಯಕ್ ಕುಕ್ಕೆಹಳ್ಳಿ, ಪ್ರಜ್ವಲ್ ನಾಯಕ್ ಆತ್ರಾಡಿ ಅವರಿಂದ ‘ಸಂಗೀತ ಸೌರಭ’ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.